ಉಳ್ಳಾಲ: ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ನಡೆದ ವಿವಿಧ ಅಧಿಕಾರಿಗಳ ಸಮಾಲೋಚನ ಸಭೆ
ಉಳ್ಳಾಲ,ಮಾ.17: ಕುಂಪಲ ಗುರುನಗರದ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವವು ಯಾವುದೇ ಅಡೆತಡೆಗಳಿಲ್ಲದೆ ಸುಸಜ್ಜಿತವಾಗಿ ನಡೆಯಲು ಎಲ್ಲಾ ಇಲಾಖೆಗಳ ಸಹಕಾರ ಅಗತ್ಯ ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರದ ಕಾರ್ಯಕ್ರಮಕ್ಕೆ ಭಕ್ತಾದಿಗಳು ಸೇರಿದಂತೆ ಎಲ್ಲಾ ಧರ್ಮದ ಜನರ ಸಹಕಾರ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು. ಅವರು ಕುಂಪಲ ಗುರುನಗರದಲ್ಲಿ ಮಾ. 29 ರಿಂದ ಎ. 3ರ ವರೆಗೆ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ನಡೆದ ವಿವಿಧ ಅಧಿಕಾರಿಗಳ ಸಮಾಲೋಚನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಭಕ್ತಾದಿಗಳಿಗೆ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅಗತ್ಯ ಬಿದ್ದರೆ ಕುಡಿಯುವ ನೀರಿನ ಬೋರ್‌ವೆಲ್ ಹಾಗೂ ಸ್ಥಳೀಯ ಆಡಳಿತದ ಸಹಕಾರದಿಂದ ಸ್ವಚ್ಛತೆ ಮತ್ತು ತಾತ್ಕಾಲಿಕ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರ ತೆರೆಯುವುದು. ಅದೇ ರೀತಿ ಅನ್ನದಾನಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಯಿಂದ ಅಕ್ಕಿ ಇನ್ನಿತರ ಸಾಂಬಾರು ಪದಾರ್ಥದ ಸಾಮಾಗ್ರಿ ಒದಗಿಸುವಂತೆ ಸೂಚಿಸಲಾಗುವುದು ಎಂದು ಹೇಳಿದರು. ಟ್ರಾಫಿಕ್ ಮತ್ತು ಪಾರ್ಕಿಂಗ್ , ರಕ್ಷಣೆಗಾಗಿ ಪೊಲೀಸ್ ಇಲಾಖೆ ಮತ್ತು ಫಯರ್ ಸರ್ವಿಸ್, ಮೆಸ್ಕಾಂ ಅಧಿಕಾರಿಗಳಿಗೆ ಅವರವರ ಜವಾಬ್ದಾರಿಯ ಕೆಲಸವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿ ಕೋರಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ಶ್ರೀ ಶ್ರೀ ಅಮೃತಾನಂದ ಸ್ವಾಮೀಜಿ, ನಾಗಮಂಡಲೋತ್ಸವದ ಅಧ್ಯಕ್ಷ ಗೋಪಾಲ ಗೋಳಿಯಡಿ, ನಾಗಮಂಡಲೋತ್ಸವದ ಪ್ರಧಾನ ಕಾರ್ಯದರ್ಶಿ ಎಂ. ದಿನೇಶ್ ಕುಂಪಲ, ಚಂದ್ರಶೇಖರ್ ಚ್ಚಿಲ್, ದಿನೇಶ್ ರೈ, ಸುಷ್ಮಾ ಜನಾರ್ಧನ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಆಚಾರ್ಯ ಜೆಪ್ಪು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.