ಉಪ್ಪಿನಂಗಡಿ ಠಾಣೆಗೆ ಐಪಿಎಸ್ ಅಧಿಕಾರಿ
ಉಪ್ಪಿನಂಗಡಿ: ವಿದ್ಯಾರ್ಥಿಗಳಲ್ಲಿ ಸಮಾಜಸೇವೆಯ ಮನೋಭಾವನೆ ಬಿತ್ತಿ, ಅವರಲ್ಲಿ ಉತ್ತಮ ನಾಯಕತ್ವ ಗುಣ ಬೆಳೆಸುವ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿಸುವ ಇರಾದೆ ನಮ್ಮ ಮುಂದಿದ್ದು, ಉಪ್ಪಿನಂಗಡಿಯಲ್ಲಿ ಅದಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಎಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಮೂರು ತಿಂಗಳ ಅವಧಿಗೆ ಕರ್ತವ್ಯ ನಿರ್ವಹಿಸಲು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಗುರುವಾರ ಬಂದಿರುವ ಅವರು, ಈ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಪೊಲೀಸ್ ಇಲಾಖೆ ಬಳಸಿಕೊಳ್ಳುವುದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯವರ ಕನಸಾಗಿದ್ದು, 8, 9, 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಸಂಚಾರಿ ನಿಯಮ, ಪೋಕ್ಸೋ ಮುಂತಾದ ಕಾನೂನುಗಳ ಮಾಹಿತಿ, ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಪೊಲೀಸ್ ಇಲಾಖೆ ಮಾಡಲಿದೆ. ಅವರಿಗೆ ಪೊಲೀಸ್ ಪೆರೇಡ್‌ನಲ್ಲಿ ಭಾಗವಹಿಸುವ ಅವಕಾಶ ನೀಡಿ ಪೊಲೀಸ್ ಶಿಸ್ತನ್ನು ಅವರಲ್ಲಿ ಮೈಗೂಡಿಸಲಿದೆ ಹಾಗೂ ಜಾತ್ರಾ ಬಂದೋಬಸ್ತ್ ಸೇರಿದಂತೆ ನೈಸರ್ಗಿಕ ವಿಕೋಪಗಳಂತಹ ತುರ್ತು ಸಂದರ್ಭದ ಬಗ್ಗೆ ನೆರವು ನೀಡಲು ವಿದ್ಯಾರ್ಥಿಗಳನ್ನು ಪೊಲೀಸ್ ಇಲಾಖೆ ಬಳಸಿಕೊಳ್ಳಲಿದೆ. ಇದರಿಂದ ವಿದ್ಯಾರ್ಥಿಗಳೂ ಜೀವನದಲ್ಲಿ ಉತ್ತಮ ಶಿಸ್ತನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಲು ಸಾಧ್ಯ ಎಂದರಲ್ಲದೆ, ಪೊಲೀಸ್ ಇಲಾಖೆ ಇನ್ನಷ್ಟು ಜನಸ್ನೇಹಿಯಾಗಲು ಪ್ರಯತ್ನಿಸಲಾಗುವುದು ಎಂದರು.
ಮೂಲತಃ ಬಿಜಾಪುರದ ಇಂಡಿ ತಾಲೂಕಿನವರಾದ ಲಕ್ಷ್ಣಣ್ ನಿಂಬರ್ಗಿ ಇದೀಗ ಹುಬ್ಬಳ್ಳಿಯಲ್ಲಿ ನೆಲೆಸಿದ್ದು, ಅಲ್ಲಿಯೇ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿ 2014ರಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾಗಿದ್ದಾರೆ. ತಮ್ಮ ಪ್ರೊಬೆಷನರಿ ಅವಧಿಯಲ್ಲಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿಯೂ ಇದ್ದರು.