ವಿದ್ಯಾ ಸಂಸ್ಥೆಗಳು ಹಣ ಮಾಡುವ ಕಂಪೆನಿಗಳಾಗದೇ, ಮಾನವೀಯತೆಗೆ ಒತ್ತು ಕೊಡುವ ಸಂಸ್ಥೆಗಳಾಗಬೇಕಿದೆ - ಡಾ.ನೋರ್ಬರ್ಟ್ ಪೌಲ್
ಉಳ್ಳಾಲ: ವಿದ್ಯಾ ಸಂಸ್ಥೆಗಳು ಹಣ ಮಾಡುವ ಕಂಪೆನಿಗಳಾಗದೇ, ಮಾನವೀಯತೆಗೆ ಒತ್ತು ಕೊಡುವ ಸಂಸ್ಥೆಗಳಾಗಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಯೆನೆಪೋಯ ವಿಶ್ವವಿದ್ಯಾಲಯದ ಕಾರ್ಯವೈಖರಿ ಶ್ಲಾಘನೀಯ ಎಂದು ಜರ್ಮನಿಯ ಜೊಹನೆಸ್ ಗುಟನ್ ಬರ್ಗ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ನಿರ್ದೇಶಕ ಡಾ.ನೋರ್ಬರ್ಟ್ ಪೌಲ್ ಹೇಳಿದ್ದಾರೆ. ಅವರು ಜರ್ಮನಿಯ ಜೊಹನೆಸ್ ಗುಟೆನ್ ಬರ್ಗ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಯೇನೆಪೋಯ ವಿಶ್ವವಿದ್ಯಾಲಯದ ನೀತಿಶಾಸ್ತ್ರ ಕೇಂದ್ರವು ಐದು ವರ್ಷ ಪೂರೈಸಿದ ಪ್ರಯುಕ್ತ ಶುಕ್ರವಾರ ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ಕಾಲೇಜಿನ ಉಪನ್ಯಾಸ ಕೇಂದ್ರದಲ್ಲಿ ಜರಗಿದ ಗೋಚರತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವೈದ್ಯಕೀಯ ಶಿಕ್ಷಣ ಕ್ಷೇತ್ರಗಳು ಬಹುತೇಕ ವ್ಯಾವಹಾರಿಕವಾಗಿ ಮಾರ್ಪಾಡಾಗಿವೆ. ಇದರಿಂದ ವೈದ್ಯಕೀಯ ನೀತಿಶಾಸ್ತ್ರ ಮರೆಯಾಗುತ್ತಿದೆ. ಆರ್ಥಿಕವಾಗಿಯೂ ವೈದ್ಯಕೀಯ ಕ್ಷೇತ್ರಗಳು ಹಿಂದುಳಿದಿಲ್ಲ. ಈ ನಡುವೆ ಮಾನವೀಯತೆಗೆ ಹೆಚ್ಚಿನ ಒತ್ತು ನೀಡಿ, ಬಡ ಮತ್ತು ಗ್ರಾಮೀಣ ವರ್ಗದವರ ಸೇವೆಯಲ್ಲಿ ಯೆನೆಪೋಯ ವಿಶ್ವವಿದ್ಯಾಲಯ ತೊಡಗಿರುವುದು ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಮಾದರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಘುವೀರ್ ಸಿ.ವಿ ಮಾತನಾಡಿ ಎರಡು ವಿಶ್ವವಿದ್ಯಾಲಯದ ನಡುವಿನ ಒಪ್ಪಂದದಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಜೀವನಕ್ಕೆ ಉಪಯುಕ್ತವಾದ ನೀತಿ ಪಾಠವನ್ನು ಕಲಿತಂತಾಗಿದೆ ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ನೀತಿಶಾಸ್ತ್ರದ ಅರಿವು ಮತ್ತು ಪಾಲನೆಯನ್ನು ವಿಸ್ತಾರಗೊಳಿಸುವ ಸಾಧ್ಯತೆಗಳ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ನೇತ್ರಶಾಸ್ತ್ರ ವಿಭಾಗದ ಪ್ರೊ.ಉಮಾ ಕುಲಕರ್ಣಿ ನಡೆಸಿಕೊಟ್ಟರು. ಈ ಸಂದರ್ಭ ನೀತಿಶಾಸ್ತ್ರ ಕೇಂದ್ರವನ್ನು ಮುಂದಿನ ಐದು ವರ್ಷಗಳಿಗೆ ವಿಸ್ತರಿಸುವ ಒಪ್ಪಂದಗಳಿಗೆ ಎರಡು ವಿಶ್ವವಿದ್ಯಾಲಯಗಳು ಸಹಿ ಹಾಕಲಾಯಿತು. ಪರಸ್ಪರ ವಿದ್ಯಾರ್ಥಿ ವಿನಿಮಯ, ಬೋಧಕ ಸಿಬ್ಬಂದಿ ವಿನಿಮಯ, ಸಂಶೋಧನೆ ಸಹಭಾಗಿತ್ವದಲ್ಲಿ ಶೈಕ್ಷಣಿಕ ಕೋರ್ಸುಗಳನ್ನು ನಡೆಸುವ ಒಪ್ಪಂದ ಇದಾಗಿದೆ. ಯೆನೆಪೋಯ ವೈದ್ಯಕೀಯ ಕಾಲೇಜಿನ ಡೀನ್ ಡಾ.ಗುಲಾಂ ಜಿಲಾನಿ ಖಾದಿರಿ ಸ್ವಾಗತಿಸಿದರು. ನೀತಿಶಾಸ್ತ್ರ ಕೇಂದ್ರದ ನಿರ್ದೇಶಕಿ ಡಾ.ವೀಣಾ ವಾಸ್ವಾನಿ ನಿರ್ವಹಿಸಿದರು. ಯೆನೆಪೋಯ ದಂತ ಕಾಲೇಜಿನ ವೈದ್ಯ ಡಾ.ಹರಿಕಿಶೋರ್ ವಂದಿಸಿದರು.