ಖಾಲಿಸ್ತಾನ್‌ವಾದಿ ಸಂಘಟನೆಯ ನಿಷೇಧ ತೆರವುಗೊಳಿಸಲಿರುವ ಬ್ರಿಟನ್!
Update: 2016-03-18 16:27 IST
ಲಂಡನ್, ಮಾರ್ಚ್.18: ಹೌಸ್ ಆಫ್ ಕಾಮನ್ಸ್ ಚರ್ಚೆಯೊಂದು ನಡೆದ ನಂತರ ಬ್ರಿಟನ್ ಖಾಲಿಸ್ತಾನ್ ಬೆಂಬಲದ ಉಗ್ರವಾದಿ ಸಂಘಟನೆಗೆ ಹದಿನೈದು ವರ್ಷಗಳಿಂದ ಹೇರಲಾದ ನಿಷೇಧವನ್ನು ತೆರವುಗೊಳಿಸಲಿದೆ. ಸದನದಲ್ಲಿ ಚರ್ಚೆಯ ನಂತರ ಈ ಸಂಘಟನೆ ಭಯೋತ್ಪಾದಕರೊಂದಿಗೆ ಸೇರಿದೆ ಎಂಬುದಕ್ಕೆ ಈಗ ಸೂಕ್ತವಾದ ಯಾವುದೇ ಪುರಾವೆಯಿಲ್ಲ ಎಂದು ಬಿಟನ್ ಅಭಿಪ್ರಾಯ ಪಟ್ಟಿದೆ. ಬ್ರಿಟಿಷ್ ಸಂಸತ್‌ನಲ್ಲಿ ಈ ವಾರ 1980ರಲ್ಲಿ ಭಯೋತ್ಪಾದನೆ ಪ್ರಚೋದಿತ ಪಂಜಾಬ್‌ನಲ್ಲಿ ಇದ್ದ ಇಂಟರ್‌ನೇಶನಲ್ ಸಿಖ್ ಯೂತ್ ಫೆಡರೇಶನ್ (ಐಎಸ್‌ವೈಎಫ್) ಹತ್ಯೆ, ಬಾಂಬ್ ಸ್ಫೋಟ ಮತ್ತು ಅಪಹರಣದಲ್ಲಿ ಶಾಮಿಲಾಗಿತ್ತು ಎಂದು ಹೇಳಲಾಗಿತ್ತು. ಆದರೆ ಮಂಗಳವಾರ ರಾತ್ರೆ ಸಮಾಪ್ತವಾದ ಭಯೋತ್ಪಾದನೆ ತಡೆಗೆ ಸಂಬಂಧಿಸಿದ ಚರ್ಚೆಯಲ್ಲಿ ಈಗಲೂ ಐಎಸ್‌ವೈಎಫ್ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವುದಕ್ಕೆ ಸೂಕ್ತ ಪುರಾವೆಗಳು ಲಭ್ಯವಾಗಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ.