ಸುರತ್ಕಲ್ : ತಂಡಗಳ ನಡುವೆ ಹೊಡೆದಾಟ - 6 ಮಂದಿಗೆ ಗಾಯ
ಸುರತ್ಕಲ್,ಮಾ.18: ತಂಡಗಳ ನಡುವೆ ಹೊಡೆದಾಟ ನಡೆದು ಇತ್ತಂಡಗಳ 6 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕೃಷ್ಣಾಪುರ 7ನೇ ಬ್ಲಾಕ್ ನ ಶಾಲೆಯ ಮುಂಭಾಗದಲ್ಲಿರುವ ಅಂಗಡಿಯೊಂದರಲ್ಲಿ ಕೋಲ್ಡ್ ಡ್ರಿಂಕ್ಸ್ ಕುಡಿಯುತ್ತಿದ್ದ ವೇಳೆ ಕಾಟಿಪಳ್ಳ ನಿವಾಸಿಗಳಾದ ಕೃಷ್ಣಾಪುರ ನಿವಾಸಿಗಳಾದ ಸಂಶುದ್ಧೀನ್, ಅಫೀಝ್, ಜಾವಿದ್ ಮತ್ತು ನಿಝಾಮ್ ಎಂಬವರು ತಲವಾರು ಹಾಗೂ ಚಾಕುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಕಾಟಿಪಳ್ಳ ನಿವಾಸಿಗಳಾದ ಸಾಹಿಲ್ ಮತ್ತು ನವಾಝ್ ಎಂಬವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಸುರತ್ಕಲ್ ಪಧ್ಮಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಅಲ್ಲದೆ, ಸಂಶುದ್ಧೀನ್, ಅಫೀಝ್, ಜಾವಿದ್ ಮತ್ತು ನಿಝಾಮ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಜಾವಿದ್ ಮತ್ತು ಸಾಹಿಲ್ ಎಂಬವರು ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಕಳೆದ ಈದ್ ಮಿಲಾದ್ ವೇಳೆ ಕ್ಷುಲ್ಲಕ ಕಾರಣಕ್ಕೆ ಇತ್ತಂಡಗಳ ನಡುವೆ ಕಲಹ ನಡೆದಿದ್ದು ಬಳಿಕ ಹಲವು ಬಾರಿ ಮಾತಿನ ಚಕಮಕಿ ಸೇರಿದಂತೆ ಹೊಡೆದಾಟಗಳು ನಡೆದಿತ್ತು ಎಂದು ತಿಳಿದು ಬಂದಿದೆ. ಆದರೆ, ಈ ಬಾರಿ ಅತಿರೇಕಕ್ಕೆ ಹೋದ ಜಗಳ ತಲವಾರುಗಳಿಂದ ಹಲ್ಲೆ ನಡೆಯುವ ವರೆಗೆ ನಡೆದು ಇತ್ತಂಡಗಳು ಆಸ್ಪತ್ರೆಗೆ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಯಲ್ಲಿ ದಾಖಲಾದ ಎರಡೂ ತಂಡಗಳನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕಿರುವ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.