ಪುತ್ತೂರು: ಕಾನೂನು ಸಾಕ್ಷರತಾ ರಥ ಅಭಿಯಾನ
ಪುತ್ತೂರು: ಸಂಸ್ಥೆಗಳಲ್ಲಿ ಕಾರ್ಮಿಕರು ಮತ್ತು ಆಡಳಿತ ಮಂಡಳಿ ಹೊಂದಾಣಿಕೆಯಿಂದ ಮುಂದುವರಿದಾಗ ಮಾತ್ರ ಆ ಸಂಸ್ಥ ಏಳಿಗೆಯನ್ನು ಕಾಣಲು ಸಾದ್ಯ ಎಂದು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ವಿ. ನಾಗರಾಜ್ ಹೇಳಿದರು.
ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಪುತ್ತೂರು ಆಶ್ರಯದಲ್ಲಿ ವಿವಿಧ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶುಕ್ರವಾರ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಸಭಾಂಗಣದಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವಿನ ಸಂಬಂಧ ಚೆನ್ನಾಗಿರಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಇಬ್ರಾಹಿಂ ಎಂ. ಮುಜಾವರ್ ಮಾತನಾಡಿ ದೈನಂದಿನ ವ್ಯವಹಾರದಲ್ಲಿ ಬಳೆಕಯಾಗುವ ಕಾನೂನನ್ನು ಪ್ರತಿಯೊಬ್ಬರೂ ತಿಳಿದಿರಬೇಕು. ಕಾನೂನು ತಿಳಿದಿದ್ದರೆ ಧೈರ್ಯದ ವ್ಯವಹಾರ ನಡೆಸಲು ನೆಮ್ಮದಿಯ ಬದುಕು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕಾನೂನನ್ನು ನಾವು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ ಕಾನೂನು ಅರಿವು ಜನಸಾಮಾನ್ಯರಿಗೆ ಮುಟ್ಟಬೇಕೆಂಬ ಉದ್ದೇಶದಿಮದ ನ್ಯಾಯಾಂಗ ಇಲಾಖೆ ಕಾನೂನು ರಥ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರ ಸದುಪಯೋಗಪಡಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನ್ಯಾಯವಾದಿ ಮನೋಹರ ಎ. ಮತ್ತು ಹಿರಿಯ ಕಾರ್ಮಿಕ ನಿರೀಕ್ಷಕ ರಾಮಚಂದ್ರ ಎಚ್. ಕಾರ್ಮಿಕ ಕಾನೂನು ಕುರಿತು ಮಾಹಿತಿ ನೀಡಿದರು. ಕ್ಯಾಂಪ್ಕೋ ಚಾಕಲೇಟು ಫ್ಯಾಕ್ಟರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಫ್ರಾನ್ಸಿಸ್ ಡಿ’ಸೋಜ ಶುಭಹಾರೈಸಿದರು.
ವೇದಿಕೆಯಲ್ಲಿ ವಕೀಲರ ಸಂಘದ ಜತೆ ಕಾರ್ಯದರ್ಶಿ ರಮಾನಂದ ಕೆ., ಸಂಯೋಜಕ ವಕೀಲ ಶ್ರೀಹರಿ, ನಾರಾಯಣ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದರು. ಸಂಯೋಜಕ ವಕೀಲ ಮಹಾಬಲ ಗೌಡ ಸ್ವಾಗತಿಸಿ, ವಕೀಲರ ಸಂಘದ ಕೋಶಾಧಿಕಾರಿ ಮೋನಪ್ಪ ಎಂ. ವಂದಿಸಿದರು. ಕಾರ್ಮಿಕ ಇಲಾಖೆಯ ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮ ನಿರ್ವಹಿಸಿದರು. ಫೋಟೋ: ನ್ಯಾಯಾಧೀಶ ವಿ. ನಾಗರಾಜ್ ಮಾತನಾಡುತ್ತಿರುವುದು.