×
Ad

ಪುತ್ತೂರು ಜಾತ್ರಾ ಆಮಂತ್ರಣ ಪತ್ರಿಕೆ ವಿವಾದ: ಹೈಕೋರ್ಟಿಗೆ ರಿಟ್ ಅರ್ಜಿ, ಸೋಮವಾರ ಅರ್ಜಿ ವಿಚಾರಣೆ

Update: 2016-03-18 19:30 IST

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಹೆಸರನ್ನು ಮುದ್ರಿಸಿರುವುದನ್ನು ವಿರೋಧಿಸಿ ವಿಹಿಂಪ ಪುತ್ತೂರು ಪ್ರಖಂಡ ಕಾರ್ಯದರ್ಶಿ ನವೀನ್ ಕುಲಾಲ್ ಎಂಬವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟು ಅರ್ಜಿ ವಿಚಾರಣೆಯನ್ನು ಮಾ.21(ಸೋಮವಾರ)ಕ್ಕೆ ಮುಂದೂಡಿದೆ.

  ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಅನ್ಯ ಮತೀಯರಾದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಹೆಸರನ್ನು ಮುದ್ರಿಸಿರುವ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದೂರು ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ಕರ್ನಾಟಕ ಸರಕಾರದ ಕಂದಾಯ ಮತ್ತು ಮುಜರಾಯಿ ಇಲಾಖೆಯ ಕಾರ್ಯದರ್ಶಿ, ಹಿಂದೂ ದಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರು, ದ.ಕ. ಜಿಲ್ಲಾ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ಇಲಾಖೆಯ ಆಯುಕ್ತರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಕಾರ್ಯ ನಿರ್ವಹಣಾಧಿಕಾರಿ ಹಾಗೂ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವದ ಕುರಿತಂತೆ ಫೆ. 18 ರಂದು ಮುದ್ರಿಸಲಾದ ಆಮಂತ್ರಣ ಪತ್ರಿಕೆಯಲ್ಲಿ ಐದನೇ ಪ್ರತಿವಾದಿ ದ.ಕ. ಜಿಲ್ಲಾಧಿಕಾರಿಯವರ ಹೆಸರು ಮುದ್ರಿಸಿರುವುದರಿಂದ ಈ ಆಮಂತ್ರಣ ಪತ್ರಿಕೆಯನ್ನು ವಿತರಿಸಬಾರದು. ಅಲ್ಲದೆ ಐದನೇ ಪ್ರತಿವಾದಿಯವರು ದೇವಾಲಯದ ಆಡಳಿತಾತ್ಮಕ ವಿಷಯದಲ್ಲಿ ಪ್ರವೇಶ ಮಾಡಬಾರದು. ಮತ್ತು ಈ ಕುರಿತು ಸಮಸ್ಯೆ ಪರಿಹಾರಾತ್ಮಕ ಮಧ್ಯಂತರ ಆದೇಶವನ್ನು ನ್ಯಾಯಾಲಯ ನೀಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿತ್ತು.

ಸರ್ಕಾರದ ಪರ ವಕೀಲರು ದಾಖಲೆ ಹಾಜರು ಪಡಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News