×
Ad

ಎ. 15ರಿಂದ ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಅವಕಾಶವಿಲ್ಲ: ಎ.ಬಿ. ಇಬ್ರಾಹೀಂ

Update: 2016-03-18 19:47 IST

ಮಂಗಳೂರು, ಮಾ. 18: ಕರ್ನಾಟಕ ರಾಜ್ಯ ಪತ್ರದ ಮೂಲಕ ರಾಜ್ಯದಲ್ಲಿ ನಿಷೇಧಿಸಲಾಗಿರುವ ಪ್ಲಾಸ್ಟಿಕ್‌ಗಳ ಉತ್ಪಾದನೆಯನ್ನು ಇಂದಿನಿಂದಲೇ ಸ್ಥಗಿತಗೊಳಿಸುವಂತೆ ಉತ್ಪಾದಕರಿಗೆ ಸೂಚನೆ ನೀಡಿರುವ ದ.ಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಎಪ್ರಿಲ್ 15ರಿಂದ ಜಿಲ್ಲೆಯಲ್ಲಿ ಇವುಗಳ ಬಳಕೆಗೆ ಅಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಭೆಯಲ್ಲಿ ಜಿಲ್ಲಾಧಿಕಾರಿ ಈ ಸೂಚನೆ ನೀಡಿದರು.

ಜಿಲ್ಲೆಯ ಪ್ಲಾಸ್ಟಿಕ್ ತಯಾರಕರು ಮುಖ್ಯವಾಗಿ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ಇಂದಿನಿಂದ ಉತ್ಪಾದನೆ ಮಾಡುವುದನ್ನು ಸ್ಥಗಿತಗೊಳಿಸಬೇಕು. ಮಾತ್ರವಲ್ಲದೆ ಈಗಾಗಲೇ ತಯಾರಾಗಿ ಸಂಗ್ರಹಿಸಿರುವ (ಸ್ಟಾಕ್) ಈ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಮಾರ್ಚ್ 31ರೊಳಗೆ ಮಾರಾಟವನ್ನು ಮುಗಿಸಬೇಕು. ಸಗಟು ಮಾರಾಟಗಾರರಿಗೆ ಇದರ ಮಾರಾಟಕ್ಕೆ ಮುಂದಿನ 7 ದಿನಗಳವರೆಗೆ ಕಾಲಾವಕಾಶ ನೀಡಲಾಗುತ್ತಿದ್ದು, ಚಿಲ್ಲರೆ ಮಾರಾಟಗಾರು ಮತ್ತೆ ಮುಂದಿನ 7 ದಿನಗಳೊಳಗೆ ಮಾರಾಟವನ್ನು ಕೊನೆಗೊಳಿಸಬೇಕು. ಎಪ್ರಿಲ್ 15ರಿಂದ ಜಿಲ್ಲೆಯಲ್ಲಿ ಈ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ಹಾಗೂ ಮಾರಾಟ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಆರಂಭದಲ್ಲಿ 7 ದಿನಗಳೊಳಗೆ ಇರುವ ನಿಷೇಧಿತ ಪ್ಲಾಸ್ಟಿಕ್‌ಗಳ ಸ್ಟಾಕ್‌ಗಳನ್ನು ಖಾಲಿ ಮಾಡುವಂತೆ ಉತ್ಪಾದಕರಿಗೆ ಸೂಚಿಸಿದಾಗ, ಅಷ್ಟು ಕಡಿಮೆ ಅವಧಿಯಲ್ಲಿ ಈಗಾಗಲೇ ಉತ್ಪಾದನೆಯಾಗಿರುವ ವಸ್ತುಗಳನ್ನು ಖಾಲಿ ಮಾಡಲು ಅಸಾಧ್ಯ, ಕನಿಷ್ಠ ಮೂರು ತಿಂಗಳ ಕಾಲಾವಕಾಶವನ್ನು ಒದಗಿಸಬೇಕು. ಉತ್ಪಾದನೆಯನ್ನು ಇಂದಿನಿಂದಲೇ ನಿಲ್ಲಿಸಲು ಬದ್ಧ ಎಂದು ಮನವಿ ಮಾಡಿದರು.

ಆದರೆ, ಈಗಾಗಲೇ ಸರಕಾರದ ಅಧಿಸೂಚನೆ ಬಂದಿರುವುದರಿಂದ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದಕರಿಗೆ ಮಾಹಿತಿ ಇರುವುದರಿಂದ, ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ಈಗಾಗಲೇ ಉತ್ಪಾದನೆಯಾಗಿರುವ ಕೆಲವೊಂದು ನಿಗದಿತ ಸಂಸ್ಥೆಯ ಕಂಪನಿಗಳ ಪ್ಲಾಸ್ಟಿಕ್ ಚೀಲಗಳನ್ನು ಅಷ್ಟೊಂದು ಕಡಿಮೆ ಕಾಲಾವಕಾಶದಲ್ಲಿ ಖಾಲಿ ಮಾಡಲು ಸಾಧ್ಯ ಇಲ್ಲವಾಗಿದ್ದು, ಇದರಿಂದ ಉತ್ಪಾದಕರು ಭಾರೀ ನಷ್ಟವನ್ನು ಕೂಡಾ ಅನುಭವಿಸಬೇಕಾಗುತ್ತದೆ ಎಂದು ಪಾಸ್ಟಿಕ್ ಉತ್ಪಾದಕರ ಸಂಘದ ಸದಸ್ಯ ರೋಶನ್ ಬಾಳಿಗ, ಮುಸ್ಲಿಂ ವ್ಯಾಪಾರಸ್ಥರ ಸಂಘದ ಹಮೀದ್ ಕಂದಕ್, ಮಾಂಸ ವ್ಯಾಪಾರಸ್ಥರ ಸಂಘದ ಮುಖ್ಯಸ್ಥರಾದ ಅಲಿಹಸನ್ ಮೊದಲಾದವರು ಅಸಮಾಧಾನ ವ್ಯಕ್ತಪಡಿಸಿದರು. ಕನಿಷ್ಠ ಒಂದು ತಿಂಗಳ ಕಾಲಾವಕಾಶವನ್ನಾದರೂ ನೀಡಬೇಕು ಎಂದು ಆಗ್ರಹಿಸಿದರು.

ಕೊನೆಗೆ ಅಧಿಕಾರಿಗಳ ಜತೆಗಿನ ಚರ್ಚೆಯ ಬಳಿಕ ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸುತ್ತಾ, ಪ್ಲಾಸ್ಟಿಕ್ ಉತ್ಪಾದಕರು ಸಭೆಯಲ್ಲಿ ಭರವಸೆ ನೀಡಿರುವಂತೆ ಮಾತನ್ನು ಉಳಿಸಿಕೊಳ್ಳಬೇಕು. ನಿಗದಿತ ಅವಧಿಯ ಬಳಿಕ ಮಾತನ್ನು ಮುರಿದು ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆಯಾದಲ್ಲಿ ಜಿಲ್ಲಾಡಳಿತ ಕ್ರಮ ವಹಿಸುವುದು ಅನಿವಾರ್ಯವಾದೀತು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯಪತ್ರದ ಪ್ರಕಾರ ಯಾವುದೇ ವ್ಯಕ್ತಿ, ಅಂಗಡಿ ಮಾಲಿಕ, ಮಾರಾಟಗಾರ, ಸಗಟು ಮಾರಾಟಗಾರ ಅಥವಾ ಚಿಲ್ಲೆರೆ ವ್ಯಾಪಾರಿ, ವಯಾಪಾರಿ ಮತ್ತು ಮಾರಾಟಗಾರರು, ಯಾವುದೇ ದಪ್ಪದ ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮ, ಕ್ಲಿಂಗ್ ಫಿಲ್ಮ್ಸ್‌ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‌ನಿಂದ ತಯಾರಾದ ಮೇಲ್ಕಂಡ ವಸ್ತುಗಳ ಬಳಕೆುನ್ನು ರಾಜ್ಯಾದ್ಯಾಂತ ನಿಷೇಧಿಸಲಾಗಿದೆ.

ನೈಲಾನ್ ಕೈ ಚೀಲಗಳು (ಕ್ಯಾರಿ ಬ್ಯಾಗ್) ಬಳಸುವಂತಿಲ್ಲ!

ಪ್ಲಾಸ್ಟಿಕ್ ಎಂದರೆ ಪಾಲಿ ಪ್ರೊಪೈಲಿನ್ (ಪಿಪಿ), ನಾನ್ ಓವನ್ ಪಾಲಿ ಪ್ರೊಪೈಲಿನ್, ಮಲ್ಟಿ ಲೇಯರ್ಡ್‌ ಕೋ ಎಕ್ಸ್‌ಟ್ರೂಡರ್ ಪಾಲಿಪ್ರೊಪೈಲಿನ್, ಪಾಲಿ ಇತಲಿನ್, ಪಾಲಿ ವಿನೈಲ್ ಕ್ಲೋರೈಡ್, ಹೈ ಮತ್ತು ಲೋ ಡೆನ್ಸಿಟಿ ಪಾಲಿ ಇತನಿಲ್, ಥರ್ಮಕೋಲ್ ಎಂದು ಕರೆಯಲ್ಪಡುವ ಪಾಲಿ ಸ್ಟಿರಿನ್ (ಪಿಎಸ್), ಪಾಲಿ ಆಮ್ಲೈಡ್ಸ್ (ನೈಲಾನ್), ಪಾಲಿ ಟೆರಫಲೇಟ್ (ಪಿಟಿ) ಪಾಲಿ ಮಿಥೇಲ್ ಮೆಥಕ್ವಿಲೇಟ್ (ಪಿಎಂಎಂ) ಮತ್ತು ಪ್ಲಾಸ್ಟಿಕ್ ಮೈಕ್ಸೋ ಬೀಡ್ಸ್‌ಗಳಿಂದ ತಯಾರಾದ ವಸ್ತುಗಳು ಕೂಡಾ ರಾಜ್ಯಪತ್ರದಲ್ಲಿ ನಿಷೇಧಿಸಲಾಗಿದ್ದು, ಬಹು ಕಾಲ ಬಾಳಿಕೆಯ ಹಿಂದಿನ ಕಾಲದಲ್ಲೂ ಹೆಚ್ಚಾಗಿ ಉಪಯೋಗಿಸಲ್ಪಡುತ್ತಿದ್ದ ನೈಲಾನ್ ಕೈಚೀಲಗಳನ್ನು ಬಳಸುವಂತಿಲ್ಲ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಪರಿಸರಾಧಿಕಾರಿ ರಾಜೇಖರ್ ಪುರಾಣಿಕ್ ಸ್ಪಷ್ಟಪಡಿಸಿದರು.

ಪ್ಲಾಸ್ಟಿಕ್ ನಿಷೇಧಿಸಿದರೆ, ಕೋಟ್ಯಂತರ ರೂ.ಗಳನ್ನು ಬ್ಯಾಂಕ್‌ನಿಂದ ಸಾಲ ಪಡೆದು ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆಗಾಗಿ ಹಾಕಲಾಗಿರುವ ಯಂತ್ರಗಳನ್ನು ಏನು ಮಾಡುವುದು ಎಂದು ಸಭೆಯಲ್ಲಿದ್ದ ಪ್ಲಾಸ್ಟಿಕ್ ಉತ್ಪಾದಕರು ಪ್ರಶ್ನಿಸಿದಾಗ, ಪ್ಲಾಸ್ಟಿಕ್ ಚೀಲಗಳಿಗೆ ಮಾತ್ರವೇ ನಿಷೇಧವಿರುವುದರಿಂದ ಇತರ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸುವಲ್ಲಿ ತೊಂದರೆಯಿಲ್ಲ. ಮಾತ್ರವಲ್ಲದೆ, ಜಿಲ್ಲೆಯಲ್ಲಿ ಒಟ್ಟು 25 ಪ್ಲಾಸ್ಟಿಕ್ ಉತ್ಪಾದನಾ ಕೈಗಾರಿಗಳಲ್ಲಿ ಶೇ. 25ರಷ್ಟು ನಿಷೇಧಿತ ಪ್ಲಾಸ್ಟಿಕ್ ಕೈಚೀಲಗಳನ್ನು ಮಾತ್ರ ಉತ್ಪಾದಿಸಲಾಗುತ್ತಿದೆ ಎಂದು ಪರಿಸರ ಅಧಿಾರಿ ರಾಜಶೇಖರ ಪುರಾಣಿಕ್ ತಿಳಿಸಿದರು.

ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳಿಗೆ ಪರ್ಯಾಯವಾಗಿ ಬಟ್ಟೆ, ಸೆಣಬು ಮೊದಲಾದ ಮಣ್ಣಿನಲ್ಲಿ ಕರಗಬಲ್ಲ ಕೈಚೀಲಗಳನ್ನು ತಯಾರಿಸುವ ಮೂಲಕ ಉದ್ಯೋಗವೂ ಸೃಷ್ಟಿಯಾಗಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ನುಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಮನಪಾ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್, ಪುತ್ತೂರು ಸಹಾಯಕ ಆುುಕ್ತ ರಾಜೇಂದ್ರ ಉಪಸ್ಥಿತರಿದ್ದರು.

ಪ್ಲಾಸ್ಟಿಕ್‌ಗೆ ಪರ್ಯಾಯ ಬಟ್ಟೆ ಚೀಲಗಳ ವಿತರಣೆಗೆ ಸೂಚನೆ

ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆಗಳು ಕನಿಷ್ಠ 2 ಲಕ್ಷದಷ್ಟು ಬಟ್ಟೆ ಚೀಲಗಳನ್ನು ಉಚಿತವಾಗಿ ಹಂಚುವ ಕಾರ್ಯದ ಮೂಲಕ ಉತ್ತೇಜನ ನೀಡಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ 1 ಲಕ್ಷ ಬಟ್ಟೆ ಚೀಲಗಳನ್ನು ಮನಪಾ ಹಾಗೂ ಕೆಸಿಸಿಐ ಸಹಭಾಗಿತ್ವದಲ್ಲಿ ವಿತರಿಸುವ ಕಾರ್ಯ ನಡೆಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ನಿರ್ದೇಶನ ನೀಡಿದರು.

ದೇವಳಗಳಲ್ಲಿ 7 ದಿನಗಳಲ್ಲಿ ಬಟ್ಟೆಚೀಲಗಳನ್ನು ಪೂರೈಸಲು ಕ್ರಮ

ಪ್ರಸ್ತುತ ದೇವಸ್ಥಾನಗಳಲ್ಲಿ ಪ್ರಸಾದ ನೀಡಲು ನಾನ್ ಓವನ್ ಕ್ಯಾರಿ ಬ್ಯಾಗ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಇದು ಕೂಡಾ ನಿಷೇಧಿತ ಪ್ಲಾಸ್ಟಿಕ್ ಪದಾರ್ಥವಾಗಿದ್ದು, ಇದರ ಬದಲಿಗೆ ಬಟ್ಟೆ ಚೀಲಗಳನ್ನು ವಿತರಿಸಲು ಏಳು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಕೆಲವೊಂದು ದೇವಸ್ಥಾನಗಳಲ್ಲಿ ಈಗಾಗಲೇ ಬಟ್ಟೆ ಚೀಲಗಳ ಬಳಕೆಯಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News