ಮಂಗಳೂರು: ಎ.30 ರೊಳಗೆ ದೇವಸ್ಥಾನಗಳಲ್ಲಿ ಸಿಸಿಟಿವಿ ಅಳವಡಿಸಲು ಜಿಲ್ಲಾಧಿಕಾರಿ ಸೂಚನೆ
ಮಂಗಳೂರು, ಮಾ. 18:ದೇವಸ್ಥಾನಗಳಲ್ಲಿ ಭದ್ರತೆಯ ದೃಷ್ಟಿಯಿಂದ ಸೂಚಿಸಲಾದ ಸಿಸಿಟಿವಿ ಅಳವಡಿಕೆ ಮತ್ತು ಆಭರಣಗಳ ಪೊಟೋ ಕ್ಯಾಟಲಗನ್ನು ಎ. 30 ರೊಳಗೆ ಪೂರ್ಣಗೊಳಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದರು.
ಕೊಲ್ಲೂರು ದೇವಾಲಯದಲ್ಲಿ ನಡೆದಿರುವ ಚಿನ್ನಾಭರಣಗಳ ಅವ್ಯವಹಾರಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಮುಜರಾಯಿ ದೇವಸ್ಥಾನಗಳಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಜಿಲ್ಲೆಯ ದೇವಸ್ಥಾನಗಳ ಆಡಳಿತಾಧಿಕಾರಿಗಳ, ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ದೇವಸ್ಥಾನಗಳಲ್ಲಿರುವ ಆಭರಣಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡುಬಂದರೆ ಆಯಾ ದೇವಸ್ಥಾನದ ಆಡಳಿತಾಧಿಕಾರಿಯೆ ಜವಾಬ್ದಾರಿಯಾಗಿದ್ದಾರೆ. ದೇವಸ್ಥಾನಗಳಲ್ಲಿರುವ ಚಿನ್ನಾಭರಣಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಾಧ್ಯವಿರುವಷ್ಟರಮಟ್ಟಿಗೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಪ್ರತಿದಿನ ಚಿನ್ನಭರಣಗಳ ಲೆಕ್ಕವನ್ನು ತೆಗೆದುಕೊಳ್ಳಬೇಕು, ಚಿನ್ನಾಭರಣದ ಬದಲಿಗೆ ಚಿನ್ನದ ಲೇಪನವನ್ನು ಇಟ್ಟು ಕಣ್ತಪಿಸುವ ಪ್ರಕ್ರೀಯೆಯ ಬಗ್ಗೆಯೂ ಗಮನಹರಿಸಬೇಕು ಎಂದು ಸೂಚಿಸಿದರು.
ದೇವಸ್ಥಾನಗಳ ಆಭರಣಗಳ ಪೊಟೋ ಕ್ಯಾಟಲಗ್ ಮಾಡುವ ಬಗ್ಗೆ ಸೂಚನೆಗಳನ್ನು ನೀಡಲಾಗಿದ್ದರು ಕೆಲವು ದೇವಸ್ಥಾನಗಳು ಈ ಪ್ರಕ್ರೀಯೆಯನ್ನು ಇನ್ನು ಮಾಡಿಲ್ಲ. ಪ್ರತಿದಿನವೂ ಆಡಳಿತಾಧಿಕಾರಿಗಳು ಆಭರಣಗಳ ಲೆಕ್ಕಾಚಾರವನ್ನು ಮಾಡಬೇಕು ಮತ್ತು ಪ್ರತಿವರ್ಷ ಪೊಟೋ ಕ್ಯಾಟಲಗ್‌ನಲ್ಲಿ ಆ ವರ್ಷದಲ್ಲಿ ಬಂದ ಆಭರಣಗಳ ಲೆಕ್ಕವನ್ನು ಸೇರ್ಪಡೆ ಮಾಡಬೇಕು . ಜಿಲ್ಲೆಯ ಎ ವರ್ಗದಲ್ಲಿ ಬರುವ 40 ದೇವಸ್ಥಾನಗಳ ಪೈಕಿ 18 ದೇವಸ್ಥಾನಗಳಲ್ಲಿ ಮತ್ತು ಬಿ ವರ್ಗದಲ್ಲಿ ಬರುವ 25 ದೇವಸ್ಥಾನಗಳ ಪೈಕಿ 16 ದೇವಸ್ಥಾನಗಳಲ್ಲಿ ಆಭರಣಗಳ ಪೊಟೋ ಕ್ಯಾಟಲಗ್ ಮಾಡಿಲ್ಲ. ಇದೇ ರೀತಿ ಸಿಸಿಟಿವಿ ಅಳವಡಿಕೆ ಕೂಡ ಎಲ್ಲಾ ದೇವಸ್ಥಾನಗಳಲ್ಲಿ ಆಗಿಲ್ಲ. ಕೂಡಲೆ ದೇವಸ್ಥಾನದ ಆಡಳಿತಾಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಯಲ್ಲಿರುವುದರಿಂದ ಜಿಲ್ಲೆಯ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕುಮಾರ್ ಆಭರಣಗಳ ಪೊಟೋ ಕ್ಯಾಟಲಗ್, ಸ್ಟಾಕ್ ನಿರ್ವಹಣೆ ಮಾಡಿದರೂ ಫಿಸಿಕಲ್ ವೇರಿಫಿಕೇಶನ್ ಮಾಡಲೇಬೇಕು.ದೇವಸ್ಥಾನಗಳಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವ ಬಗ್ಗೆ ರೂಪಿಸಲಾದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಬೇಕು. ದೇವಸ್ಥಾನಗಳ ಬಳಿಯಿರುವ ಅಂಗಡಿಗಳನ್ನು ಹರಾಜು ಹಾಕುವ ಬಗ್ಗೆ ಇರುವ ಮಾರ್ಗಸೂಚಿಯಂತೆ ಕ್ರಮಕೈಗೊಳ್ಳಬೇಕು ಎಂದು ಎಂದು ಸೂಚಿಸಿದರು.
ಸಭೆಯಲ್ಲಿ ಕಟೀಲು ದೇವಸ್ಥಾನದ ಆಡಳಿತಾಧಿಕಾರಿ ಗೋಕುಲ್ ದಾಸ್ ನಾಯಕ್, ಮಂಗಳೂರು ಡಿಸಿಪಿ ಶಾಂತರಾಜು, ಮುಜರಾಯಿ ಇಲಾಖೆ ತಹಶೀಲ್ದಾರ್ ಪ್ರಭಾಕರ್ ಮೊದಲಾದವರು ಉಪಸ್ಥಿತರಿದ್ದರು.
ಅಹಿತಕರ ಘಟನೆಗಳು ನಡೆಯುವ ಮುನ್ನ ಎಚ್ಚೆತ್ತುಕೊಳ್ಳಿ: ಎಸ್ಪಿ ಡಾ. ಶರಣಪ್ಪ