ಕಳ್ಳತನ ತಂಡದ ಮೂವರು ಮಹಿಳೆಯರು ಪೊಲೀಸ್ ವಶ
ಸುಬ್ರಹ್ಮಣ್ಯ, ಮಾ.18: ಯಾತ್ರಾರ್ಥಿ ಸೋಗಿನಲ್ಲಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ಕಳ್ಳತನ ಕೃತ್ಯದಲ್ಲಿ ಭಾಗಿಯಾದ ತಂಡದ ಮೂರು ಮಂದಿ ಮಹಿಳೆಯರನ್ನು ಗುರುವಾರ ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಾದವರು ಕೊಪ್ಪಳ ಜಿಲ್ಲೆ ಮೂಲದ ಶೋಭಾ (32), ಶಾಂತಾ (18), ಸುರೇಖಾ (14) ಎಂಬವರಾಗಿದ್ದಾರೆ.
ಸುಬ್ರಹ್ಮಣ್ಯಕ್ಕೆ ಬಂದ ತಂಡದ ಪೈಕಿ ಈ ಮೂರು ಮಂದಿ ಕ್ಷೇತ್ರದ ಆಸುಪಾಸಿನ ಜನನಿಬಿಡ ಸ್ಥಳಗಳಲ್ಲಿ ಹೊಂಚುಹಾಕಿ ಕಳ್ಳತನ ನಡೆಸುವ ಕೃತ್ಯದಲ್ಲಿ ನಿರತರಾಗಿದ್ದರು. ಇವರನ್ನು ಹಿಂಬಾಲಿಸಿದ ಪೊಲೀಸರು ಮೂರು ಮಹಿಳೆಯರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚಾಲಕ ಪ್ರಶಾಂತ್ ಧವನ್ ಎಂಬಾತ ತಪ್ಪಿಸಿಕೊಂಡಿದ್ದು, ಬಳಿಕ ಸೆರೆಸಿಕ್ಕ ಮಹಿಳೆಯರು ಮತ್ತು ವಾಹನವನ್ನು ಠಾಣೆಗೆ ಕರೆ ತರಲಾಗಿದೆ. ವಿಚಾರಣೆ ವೇಳೆ ಸೆರೆ ಸಿಕ್ಕ ಮಹಿಳೆಯರು ಹಲವು ಕಳ್ಳತನ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಒಪ್ಪಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡ ಸುಬ್ರಹ್ಮಣ್ಯ ಪೊಲೀಸರು ಮೂರು ಮಂದಿ ಬಂಧಿತರನ್ನು ಸುಳ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಬಂಧಿತರಿಂದ ಪರ್ಸ್, ಹಣ, ಬಟ್ಟೆ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾದ ವ್ಯಕ್ತಿ ಹಾಗೂ ತಂಡದ ಇತರ ವ್ಯಕ್ತಿಗಳಿಗಾಗಿ ಹುಡುಕಾಟ ಮುಂದುವರೆದಿದೆ.