×
Ad

ಜಾರ್ಖಂಡ್ : ಜಾನುವಾರು ವ್ಯಾಪಾರಿಗಳನ್ನು ನೇಣಿಗೆರಿಸಿ ಬರ್ಬರವಾಗಿ ಕೊಲೆ

Update: 2016-03-18 22:55 IST

ರಾಂಚಿ , ಮಾ. 18: ಶುಕ್ರವಾರದ ಮಾರುಕಟ್ಟೆಗೆ ಎಂಟು ಕೋಣಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಇಬ್ಬರು ಮುಸ್ಲಿಂ ಜಾನುವಾರು ವ್ಯಾಪಾರಿಗಳ  ಮೇಲೆ  ಸಂಘ ಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿ, ಬಳಿಕ ಅವರನ್ನು ಮರವೊಂದರಲ್ಲಿ ನೇಣು ಹಾಕಿದ ಆಘಾತಕಾರಿ ಘಟನೆ   ರಾಜಧಾನಿಯಿಂದ 100 ಕಿ. ಮಿ . ದೂರದ ಲಾತೆಹಾರ್ ಜಿಲ್ಲೆಯ ಬಾಳುಮತ್ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಮೊಹಮ್ಮದ್ (35 ) ಹಾಗು ಅವರ ಸಂಬಂಧಿ ಆಝಾದ್ ಖಾನ್ (15) ದುಷ್ಕರ್ಮಿಗಳ ದಾಳಿಗೆ ಬಲಿಯಾದವರೆಂದು ಗುರುತಿಸಲಾಗಿದೆ. 

" ಇಬ್ಬರ ಕೈಗಳನ್ನು ಒಟ್ಟಿಗೆ ಹಿಂದಕ್ಕೆ ಕಟ್ಟಲಾಗಿದ್ದ ಹಾಗು ಬಾಯಿಗೆ ಬಟ್ಟೆ ತುಂಬಿದ್ದ ಸ್ಥಿತಿಯಲ್ಲಿ ನೇಣು ಹಾಕಿರುವುದು ಕಂಡು ಬಂದಿದೆ. ಆ ದೃಶ್ಯ ನೋಡಿದರೆ ಇಬ್ಬರ ಮೇಲೂ ತೀವ್ರ ದ್ವೇಷದಿಂದ  ಅಮಾನುಷವಾಗಿ ಹಲ್ಲೆ ನಡೆಸಿರುವಂತೆ ಕಂಡು ಬರುತ್ತದೆ " ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಇಬ್ಬರು ವ್ಯಾಪಾರಿಗಳನ್ನು ಬರ್ಬರವಾಗಿ ಕೊಂದಿರುವ ಘಟನೆಯಿಂದ ಸ್ಥಳೀಯರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು. ಶವಗಳನ್ನು ಮರಗಳಿಂದ ಕೆಳಗಿಳಿಸಲು ಬಂದ ಪೊಲೀಸ್ ತಂಡದ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಕಂಡು ಪೊಲೀಸರು ಲಾಟಿ ಚಾರ್ಜ್ ನಡೆಸಿ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದರು. " ಗುಂಡು ಹಾರಾಟದಲ್ಲಿ ಯಾರಿಗೂ ಗಾಯಗಳಾಗಿಲ್ಲ " ಎಂದು ಲಾತೆಹಾರ್ ಎಸ್ಪಿ ಅನೂಪ್ ಬಿರ್ಥಾರಿ ಹೇಳಿದ್ದಾರೆ. 

" ನಾಲ್ಕು ತಿಂಗಳ ಹಿಂದೆ ಒಂದು ಗುಂಪು ಜಾನುವಾರು ವ್ಯಾಪರಿಯನ್ನು ಕೊಳ್ಳಲು ಪ್ರಯತ್ನಿಸಿತ್ತು. ಆದರೆ ಆತ ಅವರಿಂದ ತಪ್ಪಿಸಿಕೊಂಡ " ಎಂದು ಲಾತೆಹಾರ್ ಶಾಸಕ ಪ್ರಕಾಶ್ ರಾಮ್ ಹೇಳಿದ್ದಾರೆ. 

ಸ್ಥಳೀಯರು ಲಾತೆಹಾರ್ - ಚಾತ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ  ಹಲವು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಆರೋಪಿಗಳ ಬಂಧನಕ್ಕೆಆಗ್ರಹಿಸಿದರು . 

ಸಶಸ್ತ್ರ ಪಡೆಗಳನ್ನು ನಿಯೋಜಿಸಿ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಳ್ಳಲಾಗಿದೆ. ಸಂಜೆ ಶಾಂತಿ ಸಭೆ ನಡೆಸಲಾಯಿತು ಎಂದು ಡಿ ಐ ಜಿ ಸಾಕೆತ್ ಸಿಂಗ್ ಹೇಳಿದ್ದಾರೆ. 

ಈವರೆಗೆ ಘಟನೆಗೆ ಸಂಬಂಧಿಸಿ ಯಾರನ್ನೂ ಬಂಧಿಸಲಾಗಿಲ್ಲ. ಕೊಲೆಗೆ ಹಾಗು ಪೋಲೀಸರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಅಪರಿಚಿತರ ವಿರುದ್ಧ  ಪ್ರತ್ಯೇಕ ಎಫ್ ಐ ಆರ್ ಗಳು ದಾಖಲಾಗಿವೆ. " ಕೊಲೆಯ ಹಿಂದೆ ವ್ಯಾಪಾರ ದ್ವೇಷ ಅಥವಾ ಬೇರೆ ಕಾರಣಗಳಿತ್ತೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ " ಎಂದು ಎಸ್ಪಿ ಬಿರ್ಥಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News