×
Ad

ಪೊಲೀಸ್ ಕುದುರೆಯ ಮೇಲಿನ ದಾಳಿ ಆಘಾತ ತಂದಿದೆ: ವಿರಾಟ್ ಕೊಹ್ಲಿ

Update: 2016-03-18 23:27 IST

ಹೊಸದಿಲ್ಲಿ, ಮಾ.18: ಪೊಲೀಸ್ ಕುದುರೆ ‘ಶಕ್ತಿಮಾನ್’ನ ಮೇಲೆ ನಡೆದಿರುವ ದಾಳಿ ತನಗೆ ಆಘಾತ ಹಾಗೂ ಅಸಹ್ಯವನ್ನುಂಟು ಮಾಡಿದೆಯೆಂದು ತಾರಾ ದಾಂಡಿಗ ವಿರಾಟ್ ಕೊಹ್ಲಿ ಟ್ವೀಟಿಸಿದ್ದಾರೆ.
ಸೋಮವಾರ ನಡೆದಿದ್ದ ಬಿಜೆಪಿಯ ಪ್ರತಿಭಟನೆಯೊಂದರ ವೇಳೆ ಕುದುರೆಯ ಕಾಲನ್ನು ಥಳಿಸಿ ಮುರಿಯಲಾಗಿತ್ತು. ಪ್ರಾಣಿಗಳ ಮೇಲಿನ ಕ್ರೌರ್ಯದ ಆರೋಪದಲ್ಲಿ ಬಿಜೆಪಿ ಶಾಸಕ ಗಣೇಶ್ ಜೋಶಿ ಹಾಗೂ ಪಕ್ಷದ ಇನ್ನೊಬ್ಬ ಕಾರ್ಯಕರ್ತನನ್ನು ಬಂಧಿಸಲಾಗಿದೆ.
ಟ್ವಿಟರ್‌ನಲ್ಲಿ 90 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿ, ನಾಳೆ ಕೋಲ್ಕತಾದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ನಡೆಯಲಿರುವ ಟಿ-20 ಕ್ರಿಕೆಟ್ ಪಂದ್ಯದ ಮುನ್ನಾ ದಿನ ಈ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಬಿಜೆಪಿ ಪ್ರತಿಭಟನೆಯ ವೇಳೆ ಶಾಸಕನ ಏಟಿನಿಂದ ಕಾಲು ತುಂಡಾಗಿ, ರಕ್ತ ಸುರಿಸುತ್ತ ಅದನ್ನು ಎಳೆದುಕೊಂಡು ನಡೆಯುತ್ತಿದ್ದ ದೃಶ್ಯ ಟಿವಿಯಲ್ಲಿ ಪ್ರಸಾರವಾದ ಬಳಿಕ, ನಾಲ್ಕು ದಿನಗಳಲ್ಲಿ ಶಕ್ತಿಮಾನ್‌ಗೆ ಬೆಂಬಲ ಹಾಗೂ ಸಹಾನುಭೂತಿ ಮಹಾಪೂರದಂತೆ ಹರಿದುಬಂದಿದೆ.
14ರ ಹರೆಯದ ಕುದುರೆ, ತನ್ನ ಸವಾರ ಪೊಲೀಸ್ ಸಿಬ್ಬಂದಿಯನ್ನು ಬಿಜೆಪಿ ಕಾರ್ಯಕರ್ತರು ಕೆಳಗೆಳೆದು ಕಡಿವಾಣ ಜಗ್ಗಿದಾಗ ನೆಲಕ್ಕುರುಳಿತ್ತು.
ನಿನ್ನೆ ರಾತ್ರಿ ಶಕ್ತಿಮಾನ್‌ನ ಹಿಂಗಾಲನ್ನು ವೈದ್ಯರು ಕತ್ತರಿಸಿ ಕೃತಕ ಕಾಲನ್ನು ಜೋಡಿಸಿದ್ದಾರೆ.
ಶಕ್ತಿಮಾನ್ 3 ವರ್ಷ ಪ್ರಾಯದಲ್ಲೇ ಪೊಲೀಸರ ವೈಭವದ ಪೆರೇಡ್‌ಗಳ ಭಾಗವಾಗಿ ಸೇರಿತ್ತು. ಕುದುರೆಯು ಹಿಂದಿನಂತೆ ನಡೆಯಲಾರದು ಅಥವಾ ಓಡಲಾರದೆಂದು ವೈದ್ಯರು ತಿಳಿಸಿದ್ದಾರೆ. ಅದಕ್ಕೆ ದೀರ್ಘ ಕಾಲ ನೋವು ನೀಡದಿರುವುದು ಹೆಚ್ಚು ಮಾನವೀಯವೆಂದು ಕೆಲವು ಕಾರ್ಯಕರ್ತರು ಕುದುರೆಗೆ ದಯಾಮರಣ ನೀಡುವುದನ್ನು ಸಮರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News