×
Ad

ಇಸ್ರೇಲ್ ಪರ ಲಾಬಿ ಸಭೆಯಲ್ಲಿ ಭಾಗವಹಿಸಲು ಯಹೂದಿ ಬರ್ನೀ ಸ್ಯಾಂಡರ್ಸ್ ನಕಾರ

Update: 2016-03-19 17:37 IST

ವಾಶಿಂಗ್ಟನ್, ಮಾ. 19: ಅಮೆರಿಕದಲ್ಲಿ ಇಸ್ರೇಲ್ ಪರವಾಗಿ ಲಾಬಿ ಮಾಡುತ್ತಿರುವ ಗುಂಪು ಅಮೆರಿಕನ್ ಇಸ್ರೇಲಿ ಪಬ್ಲಿಕ್ ಅಫೇರ್ಸ್‌ ಕಮಿಟಿ (ಎಐಪಿಎಸಿ) ಮುಂದಿನ ವಾರ ಸಮ್ಮೇಳನವೊಂದನ್ನು ನಡೆಸುತ್ತಿದೆ. ಆದರೆ, ಅದರಲ್ಲಿ ಭಾಗವಹಿಸದಿರಲು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಹಾಗೂ ಸ್ವತಃ ಯಹೂದಿಯಾಗಿರುವ ಬರ್ನೀ ಸ್ಯಾಂಡರ್ಸ್ ನಿರ್ಧರಿಸಿದ್ದಾರೆ.

ಸ್ಯಾಂಡರ್ಸ್ ಇಂಥ ಕಠಿಣ ನಿರ್ಧಾರವನ್ನು ತೆಗೆದುಕೊಂಡಿರುವ ಅಮೆರಿಕದ ಏಕೈಕ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ.

ಎಐಪಿಎಸಿ ಮುಖ್ಯಸ್ಥ ರಾಬರ್ಟ್ ಕೋಹನ್‌ರಿಗೆ ಶುಕ್ರವಾರ ಪತ್ರವೊಂದನ್ನು ಬರೆದಿರುವ ಸ್ಯಾಂಡರ್ಸ್, ತನ್ನ ನಿಬಿಡ ಚುನಾವಣಾ ಪ್ರಚಾರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ತನಗೆ ಈ ಸಮ್ಮೇಳನದಲ್ಲಿ ಭಾಷಣ ಮಾಡಲು ಆಗುತ್ತಿಲ್ಲ ಎಂದು ಹೇಳಿ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ಸ್ಯಾಂಡರ್ಸ್, ಅಮೆರಿಕದ ಇತಿಹಾಸದಲ್ಲೇ ಅಧ್ಯಕ್ಷೀಯ ಪ್ರೈಮರಿಯಲ್ಲಿ ಸ್ಪರ್ಧಿಸಲು ಅವಕಾಶ ಪಡೆದ ಮೊದಲ ಯಹೂದಿಯಾಗಿದ್ದಾರೆ.

‘‘ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ಮೇಲೆ ಪರಿಣಾಮ ಬೀರುವ ವಿಷಯಗಳು ಖಂಡಿತವಾಗಿಯೂ ನನಗೆ, ನನ್ನ ದೇಶಕ್ಕೆ ಮತ್ತು ಜಗತ್ತಿಗೆ ಅತ್ಯಂತ ಆದ್ಯತೆಯ ವಿಷಯಗಳಾಗಿವೆ’’ ಎಂದು ಅವರು ಹೇಳಿದ್ದಾರೆ.

‘‘ದುರದೃಷ್ಟವಶಾತ್, ನಾನು ಚುನಾವಣಾ ಪ್ರಚಾರಕ್ಕಾಗಿ ದೇಶದ ಪಶ್ಚಿಮ ಭಾಗಕ್ಕೆ ಹೋಗುತ್ತಿದ್ದೇನೆ. ಅಲ್ಲಿನ ಪೂರ್ವನಿಗದಿತ ಕಾರ್ಯಕ್ರಮಗಳ ಹಿನೆಲೆಯಲ್ಲಿ ನನಗೆ ಈ ಸಮ್ಮೇಳನದಲ್ಲಿ ಭಾಗವಹಿಸಲು ಆಗುತ್ತಿಲ್ಲ’’ ಎಂದು ತನ್ನ ಪತ್ರದಲ್ಲಿ ಅವರು ಹೇಳಿದ್ದಾರೆ.

ಸಮ್ಮೇಳನದಲ್ಲಿ ಭಾಗವಹಿಸಲು ಎಐಪಿಎಸಿ ನೀಡಿರುವ ಆಹ್ವಾನವನ್ನು ತಿರಸ್ಕರಿಸುವಂತೆ ಒತ್ತಾಯಿಸುವ ಮನವಿಗೆ 18,000ಕ್ಕೂ ಅಧಿಕ ಮಂದಿ ಸಹಿ ಹಾಕಿದ ಬಳಿಕ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

‘‘ಇಸ್ಲಾಂ ಬಗ್ಗೆ ಭೀತಿಯಿರುವವರು, ವಲಸೆ ವಿರೋಧಿ ಕಾರ್ಯಕರ್ತರು ಮತ್ತು ಧಾರ್ಮಿಕ ಉಗ್ರವಾದಿಗಳು ಪಾಲ್ಗೊಳ್ಳುವ ಸಮ್ಮೇಳನದಲ್ಲಿ ಸ್ಯಾಂಡರ್ಸ್ ಭಾಗವಹಿಸುತ್ತಿಲ್ಲ ಮಾನವಹಕ್ಕುಗಳ ಕಾರ್ಯಕರ್ತ ಹಾಗೂ ಲೇಖಕ ಮ್ಯಾಕ್ಸ್ ಬ್ಲಮೆಂತಲ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಇಸ್ರೇಲ್ ಫೆಲೆಸ್ತೀನ್ ಪ್ರದೇಶಗಳನ್ನು ಅತಿಕ್ರಮಣ ಮಾಡಿರುವುದನ್ನು ಅವರು ವಿರೋಧಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News