×
Ad

ಸುಳ್ಯ ದೇವಸ್ಥಾನದಲ್ಲಿ ಸನ್ಮಾನ, ಪುತ್ತೂರು ದೇವಸ್ಥಾನದಲ್ಲಿ ಅವಮಾನ !

Update: 2016-03-19 17:41 IST

ಸುಳ್ಯ: ಪುತ್ತೂರು ಜಾತ್ರೆಯ ಆಮಂತ್ರಣದ ಹೆಸರಲ್ಲಿ ನಾಡಿನ ಸೌಹಾರ್ದ ಪರಂಪರೆಗೆ ಧಕ್ಕೆ ತರುವ ಕೃತ್ಯ ಖಂಡನೀಯ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂರವರು ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸುವ ಅಪರೂಪದ ಅಧಿಕಾರಿ. ಅಂತಹ ಜಿಲ್ಲಾಧಿಕಾರಿಯ ವಿರುದ್ಧ ಟೀಕೆ ಮಾಡುತ್ತಾ ಅವರನ್ನು ನೈತಿಕವಾಗಿ ಕುಗ್ಗಿಸುವ ಕೆಲಸ ಮಾಡುವುದು ಸರಿಯಲ್ಲ. ಜಿಲ್ಲಾಧಿಕಾರಿ ಸುಳ್ಯಕ್ಕೆ ಬಂದಾಗ ಅವರನ್ನು ಚೆನ್ನಕೇಶವ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಆದರೆ ಪುತ್ತೂರು ದೇವಸ್ಥಾನದ ವಿಚಾರದಲ್ಲಿ ಅವರನ್ನು ಅನುಮಾನಿಸುವುದು ಸರಿಯಲ್ಲ. ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿಗೆ ಸ್ಥಾನ ನೀಡಲಾಗಿದೆ. ಇದನ್ನು ತಪ್ಪು ಎನ್ನುವಂತಿಲ್ಲ. ಜಿಲ್ಲಾಧಿಕಾರಿಯೊಂದಿಗೆ ನಾವು ಹಾಗೂ ನಮ್ಮ ಹಿಂದೂ ಸಮಾಜ ಇದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಬಜೆಟನ್ನು ತುಲನಾತ್ಮಕವಾಗಿ ನೋಡಿದಾಗ ಕೇಂದ್ರ ಬಜೆಟ್‌ನಲ್ಲಿ ಕೃಷಿ ಪರವಾದ ಯೋಜನೆಗಳಿಲ್ಲ. ಆದರೆ ರಾಜ್ಯ ಬಜೆಟ್‌ನಲ್ಲಿ ರೈತಾಪಿ ವರ್ಗದವರಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳಿವೆ. ಕೇಂದ್ರ ಸರಕಾರ ಸೇವಾ ತೆರಿಗೆ ಸೇರಿದಂತೆ ಅನೇಕ ತೆರಿಗೆಗಳನ್ನು ಹೆಚ್ಚಿಸಿದ ಪರಿಣಾಮ ಜನ ಕಷ್ಟಪಡುತ್ತಿದ್ದಾರೆ ಎಂದ ಅವರು, ರಬ್ಬರ್‌ಗೆ ಬೆಂಬಲ ಬೆಲೆ ನೀಡದಿರುವುದಕ್ಕೆ ಸರಿಯಾದ ಒತ್ತಡ ನೀಡದಿರುವುದು ಕಾರಣ. ಈ ಒತ್ತಡ ಹಾಕುವಂತಹ ರಾಜಕೀಯ ಶಕ್ತಿಯನ್ನು ಜನ ನಮಗೆ ನೀಡಿಯೂ ಇಲ್ಲ ಎಂದರು. ಮರಳುಗಾರಿಕೆ ಗೊಂದಲ ಉಂಟಾಗಲು ಬಿಜೆಪಿ ಸರಕಾರ 2011ರಲ್ಲಿ ಜಾರಿಗೆ ತಂದ ಹೊಸ ಕಾನೂನು ಕಾರಣ. ಸುಪ್ರೀಂ ಕೋರ್ಟ್‌ನ ತೀರ್ಪು ಕೂಡಾ ಮರಳು ನೀತಿಗೆ ಪ್ರಭಾವ ಬೀರಿತು. ಅದೇನೇ ಇದ್ದರೂ ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡದೇ ಎಲ್ಲರೂ ಒಟ್ಟಾಗಿ ಸೇರಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದರು. ಕನ್ನಯ್ಯ ಕುಮಾರ್‌ನನ್ನು ದೇಶದ್ರೋಹಿ ಘೋಷಣೆ ಕೂಗಿದ್ದಾರೆಂದು ಆರೋಪಿಸುವವರು ರವಿಶಂಕರ್ ಗುರೂಜಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದಾಗ ಸುಮ್ಮನಿರುವುದು ಯಾಕೆ ಎಂದೂ ಅವರು ಪ್ರಶ್ನಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ನಂದರಾಜ್ ಸಂಕೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News