ಸುಳ್ಯ: ಎ.6ರಿಂದ ಪೆರುವಾಜೆ ಬ್ರಹ್ಮಕಲಶೋತ್ಸವ
ಸುಳ್ಯ: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ, ನೂತನ ಧ್ವಜಸ್ತಂಭ ಪ್ರತಿಷ್ಠೆ ಮತ್ತು ಜಾತ್ರೋತ್ಸವವು ಎ.6ರಿಂದ 19ರ ತನಕ ನಡೆಯಲಿದೆ.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ., ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಸ್.ಎನ್.ಮನ್ಮಥ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಭಕ್ತ ಜನರ ಸಹಕಾರದೊಂದಿಗೆ ದೇವಳವು ಜೀರ್ಣೋದ್ಧಾರಗೊಂಡಿದ್ದು, ಬ್ರಹ್ಮಕಲಶೋತ್ಸವವು ಸಂಭ್ರಮದಿಂದ ನಡೆಯಲಿದೆ ಎಂದು ಎಸ್.ಎನ್.ಮನ್ಮಥ ತಿಳಿಸಿದರು. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಪ್ರತಿದಿನ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದ ಸಚಿವರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗಲಿದ್ದಾರೆ ಎಂದು ಉಮೇಶ್ ಕೆ.ಎಂ.ಬಿ. ತಿಳಿಸಿದರು. 3 ವರ್ಷದ ಹಿಂದೆ 1.40 ಕೋಟಿ ಯೋಜನೆಯೊಂದಿಗೆ ದೇಗುಲದ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದ್ದು, ಇದೀಗ ಸುಮಾರು 2.15 ಕೋಟಿ ವೆಚ್ಚ ಬೇಕಾಗಿದೆ. ಸುಂದರವಾಗಿ ದೇಗುಲ ಜೀರ್ಣೋದ್ಧಾರಗೊಳ್ಳುತ್ತಿದ್ದು, ಭಕ್ತರ ಸಹಾಯ ಇನ್ನಷ್ಟು ಹರಿದು ಬರಬೇಕಾಗಿದೆ ಎಂದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸತ್ಯನಾರಾಯಣ ಕೋಡಿಬೈಲು ತಿಳಿಸಿದರು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕುಶಾಲಪ್ಪ ಪೆರುವಾಜೆ, ಕೋಶಾಧಿಕಾರಿ ಪಿ.ಮಂಜಪ್ಪ ರೈ, ಸಹಸಂಚಾಲಕ ದೇವರಾಜ್ ಆಳ್ವ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ವೆಂಕಟಕೃಷ್ಣ ರಾವ್, ಭಾಮಿನಿ ಜತ್ತಪ್ಪ ಗೌಡ, ಭಾವೈಕ್ಯ ಯುವಕ ಮಂಡಲದ ಅಧ್ಯಕ್ಷ ಪ್ರೇಮನಾಥ ರೈ, ಪ್ರಚಾರ ಸಮಿತಿ ಸಂಚಾಲಕ ಪ್ರೇಮಚಂದ್ರ, ಜಗನ್ನಾಥ ನಾಗಾಂಡ, ರಮಾನಾಥ ಅಂಕತ್ತಡ್ಕ, ವಿಶ್ವನಾಥ ಪೂಜಾರಿ ಕೊಳಂಬಳ ಮೊದಲಾದವರು ಉಪಸ್ಥಿತರಿದ್ದರು.