ಸುಳ್ಯ ನಗರ ಪಂಚಾಯತ್ : ಅಂಗೀಕಾರಗೊಳ್ಳದ ಬಜೆಟ್
ಸುಳ್ಯ: ಸುಳ್ಯ ನಗರ ಪಂಚಾಯತ್ ಬಜೆಟನ್ನು ಅಧ್ಯಕ್ಷ ಪ್ರಕಾಶ್ ಹೆಗ್ಡೆ ಶನಿವಾರ ಮಂಡಿಸಿದ್ದಾರೆ. ರೂ.12 ಕೋಟಿಯ 20 ಲಕ್ಷ ಆದಾಯವಿದ್ದು, 11 ಕೋಟಿ 59 ಲಕ್ಷವನ್ನು ವಿವಿಧ ಕೆಲಸಗಳಿಗೆ ವಿನಿಯೋಗಿಸಿ 60 ಲಕ್ಷದ 90 ಸಾವಿರ ಮಿಗತೆ ಬಜೆಟ್ ಇದಾಗಿದೆ.
ವೇತನ ಮತ್ತು ಭತ್ಯೆಗಳು ಮತ್ತು ಪಿಂಚಣಿ ವಂತಿಗೆ 52 ಲಕ್ಷ, ದಾರಿದೀಪ ಮತ್ತು ನೀರು ಸರಬರಾಜುಗಳ ವಿದ್ಯುತ್ ವೆಚ್ಚ 90 ಲಕ್ಷ, ಮುದ್ರಣ ಲೇಖನ ಸಾಮಾಗ್ರಿಗಳು ಇತ್ಯಾದಿ 3 ಲಕ್ಷದ 50 ಸಾವಿರ, ಪ್ರಯಾಣ ಭತ್ಯೆ 2 ಲಕ್ಷ, ಲೆಕ್ಕ ಪರಿಶೋಧನಾ ಶುಲ್ಕ 4 ಲಕ್ಷದ 50 ಸಾವಿರ, ಜಾಹೀರಾತು ವೆಚ್ಚ 5 ಲಕ್ಷ, ಪ್ರಾಕೃತಿಕ ವಿಕೋಪ ಸಹಾಯಧನಕ್ಕೆ 7.50 ಲಕ್ಷ, ನಗರ ಪಂಚಾಯತ್‌ಗೆ ಒಳಪಟ್ಟ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣದ ದುರಸ್ತಿಗೆ 16.50 ಲಕ್ಷ, ಅನುದಾನಗಳು, ದೇಣಿಗೆಗಳು, ರಾಷ್ಟ್ರೀಯ ಹಬ್ಬಗಳ ಆಚರಣೆ ಹೀಗೆ 8 ಲಕ್ಷ, ಕ್ರೀಡಾ ಪ್ರೋತ್ಸಾಹ ಧನಕ್ಕೆ 1.50 ಲಕ್ಷ, ಕಛೇರಿ ಸಿಬ್ಬಂದಿ ಹೊರಗುತ್ತಿಗೆ ವೆಚ್ಚ 15.60ಲಕ್ಷ, ಕೌನ್ಸಿಲಿಂಗ್ ಸಂಬಂಧಿತ ಗೌರವಧನ 5.50 ಲಕ್ಷ ಸೇರಿದಂತೆ ವಿವಿಧ ವಿಭಾಗಗಳಿಗೆ ಅನುದಾನ ವಿಂಗಡಿಸಿ ಬಂಜೆಟ್ ಮಂಡಿಸಲಾಯಿತು. ಬಜೆಟ್ ಮಂಡನೆಯಾದ ಬಳಿಕ ಮಾತನಾಡಿದ ವಿಪಕ್ಷ ಸದಸ್ಯ ಕೆ.ಎಂ.ಮುಸ್ತಫರವರು ‘ಇದು ದೂರದೃಷ್ಟಿ ಇಲ್ಲದ ಅಭಿವೃದ್ಧಿಗೆ ಪೂರಕವಾಗದ ಬಜೆಟ್, ಹಣಕಾಸಿನ ವಾಸ್ತವ ಸ್ಥಿತಿ ಅಂಕಿ ಅಂಶಗಳ ತುಲನೆ ಒಂದಕೊಂದು ಆಗುತ್ತಿಲ್ಲ ಎಂದು ಹೇಳಿದರಲ್ಲದೆ, ಯಾವುದು ಅವಶ್ಯಕತೆ ಇದೆಯೋ ಅವುಗಳಿಗೆ ಆದ್ಯತೆ ನೀಡಿಲ್ಲ. ಕುಡಿಯುವ ನೀರು, ಸ್ವಷತೆ, ಪಾರ್ಕಿಂಗ್, ಆಶ್ರಯ ಮನೆ, ಸರಕಾರಿ ಶಾಲೆ-ಅಂಗನವಾಡಿಗಳಿಗೆ ಸೌಕರ್ಯ ಒದಗಿಸಲು, ಯುವಜನರಿಗೆ ಸ್ವದ್ಯೋಗ ಕಲ್ಪಿಸಲು, ಮಹಿಳೆಯರ ಅಭಿವೃದ್ಧಿಗೆ ಇಲ್ಲಿ ಆದ್ಯತೆ ನೀಡಿಲ್ಲ. ನಾವು ಆದಾಯ ಕ್ರೋಢಿಕರಣದಲ್ಲಿ ಎಡವಿದ್ದೇವೆ. ಸುಳ್ಯ ನಗರಕ್ಕೆ ಸೂಡಾ ಬಂದಿದ್ದರೂ ಅಭಿವೃದ್ಧಿ ಶುಲ್ಕದ ಪ್ರಸ್ತಾವನೆಯಾಗಿಲ್ಲ. ಜಾಹೀರಾತು ಫಲಕದಲ್ಲಿ ಇನ್ನಷ್ಟು ಆದಾಯ ಬರುವಂತೆ ಮಾಡಬಹುದಿತ್ತು. ಇಲ್ಲಿ ಜುಜುಬಿ ಅಂಕಿಅಂಶವನ್ನು ತೋರಿಸಿದ್ದೀರಿ. ಆದ್ದರಿಂದ ಯಾವುದು ಅಗತ್ಯವೋ ಅದನ್ನು ಬಜೆಟ್‌ನಲ್ಲಿ ಸೇರಿಸಬೇಕು. ಮುಂದಿನ ಸಾಮಾನ್ಯ ಸಭೆಗೆ ಸರಿಯಾದ ಪಟ್ಟಿಯನ್ನು ಸಭೆಯ ಮುಂದಿರಿಸಿ. ನಾವು ಹೇಳಿರುವುದನ್ನು ಅದರಲ್ಲಿ ಜೋಡಿಸಿ ಬಳಿಕ ಅಂಗೀಕಾರ ಕೊಡುತ್ತೇವೆ’ ಎಂದು ಹೇಳಿದರು. ನಗರದ ಎಲ್ಲ ರಿಕ್ಷಾ ಸ್ಟ್ಯಾಂಡ್‌ಗಳಿಂದಲೂ ತೆರಿಗೆ ವಸೂಲಿ ಮಾಬೇಕು. ಅಂಗಡಿಯೊಳಗಡೆ ಇರುವ ಜಾಹೀರಾತು ಫಲಕಗಳಿಗೂ ತೆರಿಗೆ ವಿಧಿಸಬೇಕು ಎಂದು ಗೋಕುಲ್‌ದಾಸ್ ಸಲಹೆ ನೀಡಿದರು.
ಬಜೆಟ್‌ನಲ್ಲಿ ಸ್ಟೀಲ್ ಡ್ರಮ್ ವಿತರಣೆಗೆ ಎಂದು 15 ಲಕ್ಷ ಒಂದು ಕಡೆಯಲ್ಲಿ 13 ಲಕ್ಷ ಮತ್ತೊಂದು ಕಡೆ ಇರಿಸಲಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆಯುವುದು ಗ್ಯಾರಂಟಿ ಎಂದು ಸದಸ್ಯ ಕೆ.ಎಸ್.ಉಮ್ಮರ್ ಟೀಕೆ ಮಾಡಿದರು. ನೀವು ಸುಮ್ಮನೆ ಹಾಗೆಲ್ಲ ಮಾತನಾಡಬಾರದು. ಭ್ರಷ್ಟಾಚಾರ ನಡೆಯುವುದಿಲ್ಲ. ಆಧಾರ ಇಟ್ಟು ಮಾತನಾಡಿ. ಯಾವುದಕ್ಕೆ ಎಷ್ಟು ಬೇಕಾಗುತ್ತದೋ ಅಷ್ಟನ್ನು ಇಡಬೇಕಾಗುತ್ತದೆ ಎಂದು ಪ್ರಕಾಶ್ ಹೆಗ್ಡೆ ಹೇಳಿದರು. ಮೀಟಿಂಗ್‌ನಲ್ಲಿ ಆದ ನಿರ್ಣಯಗಳೇ ಕೆಲವು ಬಾರಿ ಬದಲಾವಣೆಯಾದುದು ನಮ್ಮ ಗಮನದಲ್ಲಿದೆ. ಅದು ಬಜೆಟ್‌ನಲ್ಲಿ ಆಗಬಾರದು. ಸ್ಟೀಲ್ ಡ್ರಮ್ ವಿತರಣೆಯಲ್ಲಿ 200 ರೂ.ಗೆ ಖರೀದಿಸಿ 600 ರೂ ಬಿಲ್ ಮಾಡಿ ಕೊಡುತ್ತೀರಿ ಇದು ಭ್ರಷ್ಟಾಚಾರವಲ್ಲವೇ ಎಂದು ಉಮ್ಮರ್ ಹೇಳಿದರು. ಇದಕ್ಕುತ್ತರಿಸಿದ ಅಧ್ಯಕ್ಷ ‘ಎಲ್ಲ ಕೆಲಸಗಳು ಟೆಂಡರ್ ಆಗಿಯೇ ಆಗುವುದು. ಭ್ರಷ್ಟಾಚಾರ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು. ಕೆ.ಎಂ.ಮುಸ್ತಫ ಹಾಗೂ ಕೆ.ಎಸ್.ಉಮ್ಮರ್‌ರವರು ಕೊನೆಯಲ್ಲಿ ಮಾತನಾಡಿ, ಪಾರದರ್ಶಕ ಟೆಂಡರ್ ಖಾಯಿದೆ ಇರಬೇಕು. ಟೆಂಡರ್ ಆಗದೇ ಅಥವಾ ಸಭೆಗೆ ಬಾರದೇ ಯಾವುದೇ ಕೆಲಸವನ್ನು ಮಾಡಬಾರದು. ಅದಕ್ಕೆ ಅವಕಾಶವು ಕಾನೂನಿನಲ್ಲಿಲ್ಲ. ಈ ಹಿಂದೆ ಏನಾಗಿದೆ ಎಂಬುದು ಬೇಡ, ಮುಂದೆ ಎಲ್ಲ ಕೆಲಸವೂ ಸದಸ್ಯರ ಗಮನಕ್ಕೆ ಬಂದೇ ಆಗಬೇಕು ಎಂದು ಸಲಹೆ ನೀಡಿದರು. ಆಗ ಪ್ರಕಾಶ್ ಹೆಗ್ಡೆಯವರು, ಕೆಲವು ಸಂದರ್ಭದಲ್ಲಿ ತುರ್ತು ಕೆಲಸ ಮಾಡುವ ಅವಶ್ಯಕತೆ ಇರುತ್ತದೆ. ಅಧ್ಯಕ್ಷತೆಯ ನೆಲೆಯಲ್ಲಿ ಅದನ್ನು ಮಾಡಲೇಬೇಕು ಇಲ್ಲದಿದ್ದರೆ ಅಧ್ಯಕ್ಷ ಸ್ಥಾನ ಅನ್ ಫಿಟ್. ಸುಳ್ಯ ಜೂ. ಕಾಲೇಜು ತಿರುವಿನಲ್ಲಿ ವಿವೇಕಾನಂದ ವೃತ್ತದಲ್ಲಿ ರಸ್ತೆ ಅಭಿವೃದ್ಧಿ ಕೆಲಸ, ಪ್ರೇಮಾ ಟೀಚರ್ ವಾರ್ಡ್‌ನಲ್ಲಿ 10 ಮೀಟರ್ ಡಾಮರೀಕರಣ ಮಾಡಿದ್ದೇವೆ. ಅದೆಲ್ಲ ತುರ್ತಾಗಿ ಆದ ಕೆಲಸಗಳು ಎಂದು ಹೆಗ್ಡೆ ಹೇಳಿದಾಗ ಮುಂದಿನ ದಿನದಲ್ಲಿ ಎಲ್ಲವೂ ಕಾನೂನು ರೀತಿಯಲ್ಲೇ ಕೆಲಸಗಳಾಗಬೇಕು ಎಂದು ಮುಸ್ತಫ ಹೇಳಿದರು.
ನ.ಪಂ.ನ 18 ವಾರ್ಡ್‌ಗಳಲ್ಲಿ 1 ವಾರ್ಡನ್ನು ಮಾದರಿ ವಾರ್ಡ್ ಆಗಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅದರಂತೆ ಮಾದರಿ ಕಾಲನಿಯು ಆಯ್ಕೆಯಾಗಬೇಕು. ಅಲ್ಲಿ ಬಯಲು ಮುಕ್ತ ಶೌಚಾಲಯ, ಸೋಲಾರ್ ಅಳವಡಿಕೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವಂತಿರಬೇಕು. 18 ವಾರ್ಡ್‌ಗಳ ಹೆಸರನ್ನು ಚೀಟಿಯಲ್ಲಿ ಬರೆದು ಒಂದು ವಾರ್ಡನ್ನು ಆಯ್ಕೆ ಮಾಡುವಂತಿರಬೇಕು ಎಂದು ಮುಸ್ತಫ ಸಲಹೆ ನೀಡಿದರು.
ಆಶ್ರಯ ಯೋಜನೆಯಡಿಯಲ್ಲಿ ಗುಂಪು ಮನೆಗಳನ್ನು ರಚಿಸಲು ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು, ನ.ಪಂ. ಹಳೆ ಮಾರುಕಟ್ಟೆ ಸ್ಥಳದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣಕ್ಕೆ ಪ್ರಸ್ತಾವನೆ, ಹೊಸ ಘನತ್ಯಾಜ್ಯ ವಿಲೇವಾರಿ ಸ್ಥಳ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ, ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಾತಿಗೆ ಪ್ರತೀ ವಾರ್ಡ್‌ನಲ್ಲಿ ಅದಾಲತ್, ನ.ಪಂ.ಗೆ ಸಂಬಂಧಿಸಿದ ಬೋರ್‌ವೆಲ್‌ಗೆ ನೀರು ಇಂಗಿಸುವ ಕಾಮಗಾರಿ ಕೈಗೊಳ್ಳುವುದು. ಇಂಧನ ಉಳಿತಾಯ ಯೋಜನೆಯಡಿ ಸೋಲಾ ದೀಪ ಅಳವಡಿಸುವುದು, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕುರುಂಜಿ ವೆಂಕಟ್ರಮಣ ಗೌಡರ ಶಾಶ್ವತ ಪುತ್ಥಳಿ ಮಾಡುವುದು ಇನ್ನಿತರ ಹೊಸ ಯೋಜನೆಗಳನ್ನು ಮಾಡಲಾಗುವುದೆಂದು ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಮೀನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಇಂಜಿನಿಯರ್ ಶ್ರೀದೇವಿ, ಸದಸ್ಯರಾದ ಕಿರಣ ಕುರುಂಜಿ, ಗಿರೀಶ್ ಕಲ್ಲಗದ್ದೆ, ಗೋಪಾಲ ನಡುಬೈಲು, ಪುರುಷೋತ್ತಮ ಬಂಗಾರಕೋಡಿ, ಸುನೀತಾ ಮೊಂತೆರೋ, ಪ್ರೇಮಾ ಟೀಚರ್, ಶಶಿಕಲಾ, ಶೀಲಾವತಿ, ಶ್ರೀಲತಾ ಪ್ರಸನ್ನ, ನಝೀರ್ ಶಾಂತಿನಗರ, ಹರಿಣಾಕ್ಷಿ ನಾರಾಯಣ ಇದ್ದರು.