ಕಾರ್ಕಳ: ಬಜಗೋಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ
ಕಾರ್ಕಳ: ವಿಶ್ವ ಮಹಿಳಾ ದಿನಾಚರಣೆ ಮತ್ತು ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆಯ 16ನೇ ವಾರ್ಷಿಕೋತ್ಸವ ಸಮಾರಂಭವು ಬಜಗೋಳಿಯ ಶ್ರೀ ಗಣಪತಿ ಸಭಾಭವನದಲ್ಲಿ ಭಾನುವಾರ ನಡೆಯಿತು. ಆದರ್ಶ ಸಂಸ್ಥೆಯ ಟ್ರಸ್ಟಿ ಡಾ ಎಲ್.ಸಿ. ಸೋನ್ಸ್ ಉದ್ಘಾಟಿಸಿ, ಸ್ವಸಹಾಯ ಸಂಘಗಳಿಂದ ಗ್ರಾಮೀಣ ಜನರ ಅಭಿವೃದ್ಧಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯು ಉತ್ತಮ ಕಾರ್ಯನಿರ್ವಹಿಸಿ ಜನರ ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಗೌರವ ಅತಿಥಿ, ರಾಜ್ಯ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ, ಗ್ರಾಮಾಂತರ ಮಹಿಳೆಯರು ಮುಂದಿನ ದಿನಗಳಲ್ಲಿ ಸಂಘಟಿತರಾಗಿ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಲು ಇಂತಹ ಕಾರ್ಯಕ್ರಮಗಳು ಪೂರಕವಾಗಲಿವೆ ಎಂದರು. ಶ್ರೀಮತಿ ಶೆರ್ಲಿ ಟಿ.ಬಾಬು ಉಪನ್ಯಾಸಕರು, ಆಳ್ವಾಸ್ ಸಮಾಜ ಕಾರ್ಯ ಕಾಲೇಜು ಮೂಡುಬಿದಿರೆ ಇವರು ಮಹಿಳಾ ದಿನಾಚರಣೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಮೂಡುಬಿದಿರೆ ನವಚೇತನ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ನಿ. ದ ಅಧ್ಯಕ್ಷೆ ಶೋಭಾ ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ, ಮುಡಾರು ಗ್ರಾ.ಪಂ. ಅಧ್ಯಕ್ಷೆ ಗೀತಾ ಪಾಟ್ಕರ್, ಸಂಸ್ಥೆಯ ಟ್ರಸ್ಟಿ ಹಸ್ದುಲ್ಲಾ ಇಸ್ಮಾಯಿಲ್, ಮಂಗಳೂರು ಅಂಧೇರಿ ಹಿಲ್ಪೆ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಇಮಾನ್ಯುವೆಲ್ ಮೋನಿಸ್ ಮತ್ತು ಎಂ.ಪಿ.ಟಿ ಸಹಾಯಕ ಪ್ರಾಧ್ಯಾಪಕ ವಾಟ್ಸನ್ ಅರುಲ್ ಸಿಂಗ್ ಉಪಸ್ಥಿತರಿದ್ದರು. ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆಯ , ಗ್ರಾಮಜ್ಯೋತಿ ಉಳಿತಾಯ ಮತ್ತು ಸ್ವ ಸಹಾಯ ಸಂಘಗಳ ಒಕ್ಕೂಟ, ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ. ಮೂಡುಬಿದಿರೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ನಿರ್ದೇಶಕ ಜೇಕಬ್ ವರ್ಗೀಸ್ ಸ್ವಾಗತಿಸಿದರು. ಸಹಕಾರಿಯ ಉಪಾಧ್ಯಕ್ಷೆ ಜಯಶ್ರೀ ವರದಿ ವಾಚಿಸಿದರು. ಕಾರ್ಯಕರ್ತೆ ಜಯಂತಿ ಕಾರ್ಯಕ್ರಮ ನಿರೂಪಿಸಿದರು.