ಬಿ.ಸಿ.ರೋಡ್: ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡಿದ್ರೆ ವೀಲ್ ಲಾಕ್ ಗ್ಯಾರಂಟಿ
ಬಂಟ್ವಾಳ: ನಿರಂತರ ಟ್ರಾಫಿಕ್ ಜಾಮ್ ಸಮಸ್ಯೆ ಎದುರಿಸುತ್ತಿರುವ ಬಿ.ಸಿ.ರೋಡ್ ನಗರದಲ್ಲಿ ಇನ್ನು ಮುಂದೆ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿದಲ್ಲಿ ಪೊಲೀಸರು ವೀಲ್ ಲಾಕ್ ಅಳವಡಿಸಲಿದ್ದಾರೆ ಎಚ್ಚರಿಕೆ.
ಬಿ.ಸಿ.ರೋಡ್ ನಗರದಲ್ಲಿ ಪ್ಲೈ ಓವರ್, ರೈಲ್ವೇ ಮೇಲ್ಸೇತುವೆ ನಿರ್ಮಾಣವಾದರೂ ಟ್ರಾಫಿಕ್ ಜಂಜಾಟಕ್ಕೆ ಕೊನೆ ಎಂಬುದಾಗಿಲ್ಲ. ವಾಹನ ಸವಾರರು ತಮ್ಮ ವಾಹನಗಳನ್ನು ಎಲ್ಲೆಂದೆಲ್ಲಿ ಪಾರ್ಕಿಂಗ್ ಮಾಡುವುದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಹೆಚ್ಚಲು ಕಾರಣ ಎಂಬ ಆಕ್ರೋಶಗಳು ನಾಗರೀಕರಿಂದ ಕೇಳಿ ಬಂದಿದ್ದವು.
ಇದೀಗ ಎಚ್ಚೆತುಕೊಂಡಿರುವ ಬಂಟ್ವಾಳ ಸಂಚಾರಿ ಪೊಲೀಸರು ಪ್ಲೈ ಓವರ್ ಅಡಿಯಲ್ಲಿ, ಫುಟ್ ಪಾತ್ , ನೋ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವ ವಾಹನಗಳ ಚಕ್ರಗಳಿಗೆ ಲಾಕ್ ಅಳವಡಿಸಲಿದ್ದಾರೆ.
ಶನಿವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಆರಂಭಿಸಿರುವ ಪೋಲಿಸರು, ಅಂತಹ ವಾಹನಗಳಿಂದ " 100 ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಒಂದು ವಾಹನಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು ಸರಿಯಾಗಿರದಿದ್ದಲ್ಲಿ ಇನ್ನೂ ಹೆಚ್ಚಿನ ದಂಡ ಪಾವತಿಸಬೇಕಾಗಿದೆ.
ಪೊಲೀಸರ ಈ ಕ್ರಮಕ್ಕೆ ನಾಗರಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಆದರೆ ಕಾರ್ಯಾಚರಣೆ ಎಷ್ಟು ದಿನ ಮುಂದು ವರಿಯಲಿದೆ ಎಂಬುದೇ ಪ್ರಶ್ನೆಯಾಗಿದೆ.