ಉಪ್ಪಳ ಮತ್ತೆ ಗೂಂಡಾಗಿರಿ - ಓರ್ವನಿಗೆ ಇರಿತ : ಪೋಲೀಸ್ ನಿಶ್ಕ್ರೀಯ
ಮಂಜೇಶ್ವರ : ಉಪ್ಪಳ ಪರಿಸರದಲ್ಲಿ ಮತ್ತೆ ಗೂಂಡಾ ತಂಡಗಳು ಆರ್ಭಟಿಸತೊಡಗಿದ್ದು,ಕಳೆದೊಂದು ತಿಂಗಳಿಂದ ತೆರೆಮರೆಯಲ್ಲಿದ್ದ ತಂಡಗಳು ಇದೀಗ ಮತ್ತೆ ಕ್ರೀಯಾಶೀಲವಾಗಿ ಆಕ್ರಮಣಕ್ಕೆ ತೊಡಗಿದ್ದು,ಶುಕ್ರವಾರ ರಾತ್ರೆ ಓರ್ವನನ್ನು ಆಕ್ರಮಿಸಿದೆ. ಇದಕ್ಕೆ ಕಡಿವಾನ ಹಾಕಬೇಕಾದ ಮಂಜೇಶ್ವರ ಪೋಲೀಸರು ನಿಶ್ರೀಯರಾಗಿದ್ದಾರೆಂದು ನಾಗರಿಕರು ದೂರಿದ್ದಾರೆ. ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಉಪ್ಪಳ ಕೈಕಂಬದಲ್ಲಿ ಕೋಡಿಬೈಲು ಆಶಿತ್ ಮಂಝಿಲ್ ನ ಸೋಗಲ್ ಮೊಹಮ್ಮದ್ ರ ಪುತ್ರ ಪೈಂಟಿಂಗ್ ಕಾರ್ಮಿಕ ಮೊಹಮ್ಮದ್ ಅಶ್ಫಾಕ್(34)ಎಂಬವರಿಗೆ ಇರಿದು ಗಾಯಗೊಳಿಸಿದೆ.ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಶ್ಪಾಕ್ ಕೈಕಂಬದ ರಂಜಿತ್ ಟಾಕೀಸಿನ ಬಳಿ ನಡೆದು ಸಾಗುತ್ತಿದ್ದ ವೇಳೆ ರಿಟ್ಸ್ ಕಾರಿನಲ್ಲಿ ತಲಪಿದ ಮೂವರ ತಂಡ ಮಾರಕಾಯುಧಗಳೊಂದಿಗೆ ಏಕಾಏಕಿ ಧಾಳಿ ನಡೆಸಿದೆ.
ತಿಂಗಳ ಹಿಂದೆ ಉಪ್ಪಳದಲ್ಲಿ ಅಶ್ಪಾಕ್ ರನ್ನು ಕೋವಿ ಸಹಿತ ಸೆರೆಹಿಡಿಯಲಾಗಿತ್ತು.ಕೊಲೆ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಖಾಲಿಯಾ ರಫೀಕ್ ನನ್ನು ಕೊಲ್ಲಲು ವಿರೋಧಿ ಬಣ ಖಸಾಯಿ ಅಲಿ ತನ್ನನ್ನು ಕಳಿಹಿಸಿರುವುದಾಗಿ ಅಂದು ಪೊಲೀಸರಲ್ಲಿ ಈತ ತಿಳಿಸಿದ್ದ.ಈ ಘಟನೆಯ ಬಳಿಕ ಉಪ್ಪಳದಲ್ಲಿ ಉಪ್ಪಳದಲ್ಲಿ ಗೂಂಡಾ ಸಂಘಗಳು ಪರಸ್ಪರ ಗುಂಡುಹಾರಾಟ ನಡೆಸಿ ದಾಂಧಲೆಗೆತ್ನಿಸಿತ್ತು. ಬಳಿಕ ಪೋಲೀಸ್ ಬಂಧನಕ್ಕೊಳಗಾದ ಖಾಲಿಆ ರಫೀಕ್ ಹಾಗೂ ಕಸಾಯಿ ಅಲಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.ಇವರ ವಿರುದ್ದ ಕಾಪಾ ಕಾಯ್ದೆ ಜಾರಿಗೊಳಿಸಲಾಗಿದೆ.ಇದರ ಮುಂದುವರಿಕೆಯಾಗಿ ಶುಕ್ರವಾರ ರಾತ್ರಿ ಅಶ್ಪಾಕ್ ನ ಮೇಲೆ ಆಕ್ರಮಣವೆಸಗಲಾಗಿದೆ.ಮಂಜೇಶ್ವರ ಪೋಲೀಸರು ದೂರು ದಾಖಲಿಸಿದ್ದು,ವ್ಯಾಪಕ ತನಿಖೆ ನಡೆಸುತ್ತಿದ್ದಾರೆ.
ನೂತನ ಸಿಐಗೆ ಸವಾಲು
ಕುಂಬಳೆ ನೂತನ ಸಿಐಯಾಗಿ ಅಧಿಕಾರ ವಹಿಸಿರುವ ಮುನೀರ್ ಉಪ್ಪಳದಲ್ಲಿ ಗಂಭೀರ ಸಮಸ್ಯೆ ಸೃಷ್ಟಿ ಸುತ್ತಿರುವ ಗೂಂಡಾ ತಂಡಗಳನ್ನು ನಿಯಂತ್ರಿಸುವುದೇ ತನ್ನ ಮೂಲ ಗುರಿಯೆಂದು ಹೇಳಿಕೆ ನೀಡಿದ ಬೆನ್ನಲ್ಲೇ ಮತ್ತೆ ಗೂಂಡಾ ತಂಡಗಳ ಆಕ್ರಮಣ ದೊಡ್ಡ ಸವಾಲಾಗಿ ಪರಿಣಮಿಸಿದೆ.