ಪುತ್ತೂರು ದೇವಳದ ಆಮಂತ್ರಣ ಪತ್ರಿಕೆ ವಿವಾದ : ಡಿಸಿ ಹೆಸರು ತೆಗೆಯುವುದಕ್ಕೆ ದಸಂಸ ವಿರೋಧ
ಮಂಗಳೂರು, ಮಾ.19: ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಜಾತ್ರೆಯ ಪ್ರಕಟಿತ ಆಮಂತ್ರಣ ಪತ್ರಿಕೆಯಿಂದ ಜಿಲ್ಲಾಧಿಕಾರಿ ಹೆಸರನ್ನು ಕೈಬಿಡುವುದಕ್ಕೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ತೀವ್ರ ವಿರೋಧ ವ್ಯಕ್ತಪಡಿಸಿದೆ.
ದೇವರು ಒಬ್ಬನೇ ಎಂಬ ನೆಲೆಯಲ್ಲಿ ದ.ಕ. ಜಿಲ್ಲೆಯ ಹಾದಿ ಬೀದಿಗಳಲ್ಲಿ ದೈವಸ್ಥಾನ,ದೇವಸ್ಥಾನ, ಜೈನರ ಬಸದಿಗಳು, ಚರ್ಚ್‌ಗಳು, ದರ್ಗಾ ಮಸೀದಿಗಳು ನಿರ್ಮಾಣವಾಗಿ, ಭಕ್ತರು ಜಾತಿ ಮತ ಬೇಧವಿಲ್ಲದೆ ದೇವರ ಆರಾಧನಾ ಕೇಂದ್ರಗಲಿಗೆ ಭೇಟಿ ನೀಡುವ ಮೂಲಕ ಜಿಲ್ಲೆ ಸರ್ವ ಧರ್ಮಗಳ ಸೌಹಾರ್ದತೆಗೆ ಹೆಸರಾಗಿದೆ. ಆದರೆ ಇಂದು ಕ್ಷುಲ್ಲಕ ರಾಜಕೀಯ ಕಾರಣಗಳಿಗೆ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸವಾಗುತ್ತಿದ್ದು, ಪುತ್ತೂರು ದೇವಳದ ಆಮಂತ್ರಣ ಪತ್ರಿಕೆ ವಿವಾದ ಇದಕ್ಕೊಂದು ಉದಾಹರಣೆಯಾಗಿದೆ. ಧಾರ್ಮಿಕ ಮುಜರಾಯಿ ದತ್ತಿ ಇಲಾಖೆಯ ಮುಖ್ಯಸ್ಥರಾಗಿರುವ ಕಾರಣದಿಂದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ವಿಷಯದಲ್ಲಿ ಪ್ರತಿಭಟಿಸುವ ಸ್ವಯಂ ಘೋಷಿತ ಸಂಘಟನೆಗಳ ನಡೆ ವಿವೇಚನಾರಹಿತವಾದದ್ದು.
ಒಂದು ವೇಳೆ ಜಿಲ್ಲಾಧಿಕಾರಿ ಹೆಸರು ಆಮಂತ್ರಣ ಪತ್ರಿಕೆಯಿಂದ ತೆಗೆದುಹಾಕಿದ್ದಲ್ಲಿ ದಲಿತ ಸಂಘರ್ಷ ಸಮಿತಿ ಅದನು ಉಗ್ರವಾಗಿ ವಿರೋಧಿಸುವುದಲ್ಲದೆ ಖಂಡಿಸುತ್ತದೆ ಎಂದು ದಸಂಸ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.