×
Ad

ಯುವವೈದ್ಯರಿಂದ ಕನಿಷ್ಟ ಒಂದು ಗ್ರಾಮೀಣ ಸೇವೆ: ಸಚಿವ ಶರಣಪ್ರಕಾಶ್ ಪಾಟೀಲ್ ಇಂಗಿತ

Update: 2016-03-19 20:11 IST

   ಮಂಗಳೂರು, ಮಾ. 19:ವೈದ್ಯಕೀಯ ಪದವಿಯನ್ನು ಪೂರೈಸಿದ ತಕ್ಷಣ ವೈದ್ಯರುಗಳು ಗ್ರಾಮೀಣ ಭಾಗದಲ್ಲಿ ಕನಿಷ್ಟ ಒಂದು ವರ್ಷವಾದರೂ ಸೇವೆ ಸಲ್ಲಿಸುವ ಮೂಲಕ ಗ್ರಾಮೀಣ ಜನರ ಸೇವೆ ಮಾಡುವಂತಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಹೇಳಿದರು.

     ನಗರದ ಎ.ಜೆ.ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ ಮತ್ತು ರಿಸರ್ಚ್ ಸೆಂಟರ್ ನ ಮೆಡಿಕಲ್ ಕಾಲೇಜು ಅಡಿಟೋರಿಯಂ ನಲ್ಲಿ ಪದವಿ ಪ್ರದಾನ ಸಮಾರಂಭ ಮತ್ತು ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಗೈದು ಮುಖ್ಯ ಅತಿಥಿಯಾಗಿ ಮಾತನಾಡಿದರು.

    ವೈದ್ಯಕೀಯ ವೃತ್ತಿಯೆಂಬುದು ಜನಸೇವೆಯಾಗಿದೆ. ಅತೀ ಹೆಚ್ಚು ಗೌರವವಿರುವ ವೃತ್ತಿಯಾಗಿರುವ ವೈದ್ಯಕೀಯ ವೃತ್ತಿಯ ಮೂಲಕ ಜನರ ಸೇವೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ ವೈದ್ಯರ ಸಮಸ್ಯೆಯಿರುವುದರಿಂದ ಯುವ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಕಾರ್ಯವನ್ನು ಅಗತ್ಯವಾಗಿ ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎ.ಜೆ ಸಮೂಹ ಸಂಸ್ಥೆ ಹಾಗೂ ಲಕ್ಷ್ಮೀ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಎ.ಜೆ.ಶೆಟ್ಟಿ ಕಾಲೇಜಿನಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

 ಸಮಾರಂಭದಲ್ಲಿ 2010ನೇ ಸಾಲಿನ 78 ಪದವಿ ವಿದ್ಯಾರ್ಥಿಗಳಿಗೆ, 2012ನೇ ಸಾಲಿನ 58 ಸ್ನಾತಕೋತ್ತರ ವಿದ್ಯಾರ್ಥಿಗಳು, ಒಂದು ಎಂಸಿಎಚ್ ಸ್ನಾತಕೋತ್ತರ ವಿದ್ಯಾರ್ಥಿಗೆ ಪದವಿಯನ್ನು ಪ್ರದಾನ ಮಾಡಲಾಯಿತು.

 ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ವಿ ವಿಯಲ್ಲಿ ರ್ಯಾಂಕ್ ಪಡೆದ ಸ್ನಾತಕೋತ್ತರದ 7 ವಿದ್ಯಾರ್ಥಿಗಳಿಗೆ ಮತ್ತು 28 ಪದವಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

               ಕಾರ್ಯಕ್ರಮದಲ್ಲಿ ಕೊಚ್ಚಿ ಲೇಕ್ ಸೋರ್ ಹಾಸ್ಪಿಟಲ್ ಮೆಡಿಕಲ್ ಆಂಕೋಲಿಜಿಸ್ಟ್ ಪದ್ಮಶ್ರೀ ಡಾ. ವಿ.ಪಿ.ಗಂಗಾಧರನ್‌ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, , ಎ.ಜೆ ಮೆಡಿಕಲ್ ಸೈಯನ್ಸ್ ಮತ್ತು ರಿಸರ್ಚ್ ಸೆಂಟರ್ ಡೀನ್ ಡಾ.ರಮೇಶ್ ಪೈ, ಮೆಡಿಕಲ್ ಡೈರೆಕ್ಟರ್ ಡಾ.ಪ್ರಶಾಂತ ಮಾರ್ಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News