ಸಾವಿರಕಂಬ ಬಸದಿಗೆ ಶುದ್ಧಕುಡಿಯುವ ನೀರಿನ ವ್ಯವಸ್ಥೆ
ಮೂಡುಬಿದರೆ: ಜೇಸಿಐ ಮೂಡುಬಿದರೆ ತ್ರಿಭುವನ್ ವತಿಯಿಂದ 50 ಸಾವಿರ ರೂಪಾಯಿ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಾವಿರ ಕಂಬದ ಮುಂಭಾಗ ಶನಿವಾರ ಹಸ್ತಾಂತರಿಸಲಾಯಿತು. ಮೂಡುಬಿದರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರಿಗೆ ಜೇಸಿಯ ಇಂಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾರ್ದಿಕ್ ಕಪಾಡಿಯಾ ಘಟಕವನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಭಟ್ಟಾರಶ್ರೀ, ಅಪೂರ್ವ ಕಲಾಕೃತಿ, ಆಧ್ಯಾತ್ಮಿಕ ಮನಸ್ಸನ್ನು ಜಾಗೃತಿಗೊಳಿಸುವ ಸಾವಿರ ಕಂಬದ ಬಸದಿಗೆ ಬರುವ ಯಾತ್ರಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದು, ಜೇಸಿಐನ ಹೃದಯ ಶ್ರೀಮಂತಿಕೆ ಈ ಮೂಲಕ ಅನಾವರಣಗೊಳಿಸಿದೆ. ಪ್ರತಿವರ್ಷ ಇಲ್ಲಿ ಕಾರ್ಯಕ್ರಮ ನಡೆಯಲಿ. ಶಿಕ್ಷಣ, ಸಮಾಜಸೇವೆಯ ಪುಣ್ಯದ ಕೆಲಸ ಜೇಸಿಐಯಿಂದ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಹಾರ್ದಿಕ್ ಕಪಾಡಿಯ ಮಾತನಾಡಿ, ಜೈನಧರ್ಮ ಪ್ರತಿಪಾಧಿಸಿದ ಅಹಿಂಸೆಯೇ ಪರಮಧರ್ಮ ಎಂಬ ಮಾರ್ಗದಲ್ಲಿ ಜೇಸಿಐ ಮುನ್ನಡೆಯುತ್ತಿದೆ. ಮಾನವೀಯತೆ ಜೀವನದ ಪುಣ್ಯದ ಕೆಲಸ ಎನ್ನುವ ಧ್ಯೇಯವು ಜೇಸಿಐನದ್ದಾಗಿದೆ. ಎಲ್ಲ ಧರ್ಮದವರು ಸಂಘಟಿತರಾಗಿ ಸಮಾಜವನ್ನು ಬೆಳಗಿಸುವ ಪ್ರಯತ್ನ ಜೇಸಿಐನಿಂದ ಸದಾ ನಡೆಯುತ್ತದೆ ಎಂದರು. ಜೇಸಿಐ ವಲಯ 5ರ ಅಧ್ಯಕ್ಷ ಸಂದೀಪ್ ಕುಮಾರ್, ಉಪಾಧ್ಯಕ್ಷ ರಕ್ಷಿತ್, ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್, ಜೇಸಿಐ ಮೂಡುಬಿದರೆ ತ್ರಿಭುವನ್ ಅಧ್ಯಕ್ಷೆ ರಶ್ಮಿತಾ ಯುವರಾಜ್ ಜೈನ್, ಕಾರ್ಯದರ್ಶಿ ಪ್ರಜ್ವಲ್, ನಿಕಟಪೂರ್ವ ಅಧ್ಯಕ್ಷ ದೀರೇಂದ್ರ, ವಲಯ ಅಧಿಕಾರಿಗಳಾದ ಶಾಕೀರ್, ಸುಭಾಶ್, ಅರುಣ್ ಕುಮಾರ್, ಮಂದಾರ್ ಕಾಳೆ, ಜೇಸಿರೇಟ್ ಅಧ್ಯಕ್ಷೆ ದೀಪಾ ಉಮೇಶ್ ಉಪಸ್ಥಿತರಿದ್ದರು. --
ಜೈನಮಠಕ್ಕೆ ಭೇಟಿ:
ಹಾರ್ದಿಕ್ ಕಪಾಡಿಯಾ ಅವರು ಜೈನಮಠಕ್ಕೆ ಭೇಟಿ ನೀಡಿ ಭಟ್ಟಾರಕಶ್ರೀ ಅವರ ಅಶೀರ್ವಾದ ಪಡೆದರು.
ಕಪಾಡಿಯ ಅವರನ್ನು ಸನ್ಮಾನಿಸಲಾಯಿತು.