ಉಪ್ಪಿನಂಗಡಿ:ಪೆಟ್ರೋಲ್ ಖರೀದಿಸಿದ ಗ್ರಾಹಕರೋರ್ವರಿಗೆ ಅಳತೆಯಲ್ಲಿ ವಂಚನೆ ಆರೋಪ
ಉಪ್ಪಿನಂಗಡಿ: ಪೆಟ್ರೋಲ್ ಖರೀದಿಸಿದಾಗ ಗ್ರಾಹಕರೋರ್ವರಿಗೆ ಅಳತೆಯಲ್ಲಿ ವಂಚಿಸಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರಿಂದ ಶುಕ್ರವಾರ ಮುಚ್ಚಲಾಗಿದ್ದ ಪೆಟ್ರೋಲ್ ಪಂಪ್‌ಗೆ ಶನಿವಾರ ಎಚ್‌ಪಿ ಕಂಪೆನಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದು, ತಾಂತ್ರಿಕ ದೋಷವೇ ನಿನ್ನೆಯ ಘಟನೆಗೆ ಕಾರಣವೆಂದು ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಕಲ್ಲೇರಿಯ ಹಿಂದೂಸ್ಥಾನ್ ಪೆಟ್ರೋಲ್ ಪಂಪಿನಲ್ಲಿ ಶುಕ್ರವಾರ ಗ್ರಾಹಕರೋರ್ವರು 60 ರೂಪಾಯಿಯ ಪೆಟ್ರೋಲ್ ಖರೀದಿಸಿದ್ದು, ಅವರಿಗೆ ನಿಗದಿತ ದರಕ್ಕಿಂತ ಕಡಿಮೆ ಪೆಟ್ರೋಲ್ ನೀಡುವ ಮೂಲಕ ಅಳತೆಯಲ್ಲಿ ವಂಚನೆ ಎಸಗಲಾಗಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಬಳಿಕ ಸಾರ್ವಜನಿಕರು ಪೆಟ್ರೋಲ್ ಪಂಪ್‌ಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಎಚ್‌ಪಿ ಕಂಪೆನಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವ ತನಕ ಪೆಟ್ರೋಲ್ ಪಂಪ್ ತೆರೆಯಬಾರದು ಎಂದು ಒತ್ತಾಯಿಸಿದ್ದರು. ಪ್ರತಿಭಟನೆಗೆ ಮಣಿದ ಪೆಟ್ರೋಲ್ ಪಂಪ್ ಅನ್ನು ಮುಚ್ಚಲಾಗಿತ್ತು. ಶನಿವಾರ ಬೆಳಗ್ಗೆ ಹಿಂದೂಸ್ತಾನ್ ಪೆಟ್ರೋಲ್ ಪಂಪ್‌ನ ಏರಿಯಾ ಅಳತೆ ಮಾಪನ ಅಧಿಕಾರಿ ನವೀನ್ ಕುಮಾರ್ ಎಂ.ಜಿ. ಹಾಗೂ ಇತರ ಕಂಪೆನಿಯ ಇತರ ಅಧಿಕಾರಿಗಳು ಕಲ್ಲೇರಿಯ ಪೆಟ್ರೋಲ್ ಪಂಪ್‌ಗೆ ಬಂದು, ದೂರುದಾರರ ಸಮಕ್ಷಮ ಸಮಗ್ರ ಪರಿಶೀಲನೆ ನಡೆಸಿದರು. ಆಗ ಪೆಟ್ರೋಲ್ ಪಂಪ್‌ನ ಯಂತ್ರದಲ್ಲಿ ತಾಂತ್ರಿಕ ದೋಷವಿರುವುದು ಕಂಡು ಬಂತು.
ಬಳಿಕ ಈ ಬಗ್ಗೆ ಸಾರ್ವಜನಿಕರಿಗೆ ವಿವರ ನೀಡಿದ ನವೀನ್ ಕುಮಾರ್, ಕೇವಲ ಅಳತೆ ಮಾತ್ರವಲ್ಲದೇ, ಗುಣಮಟ್ಟ ಸೇರಿದಂತೆ ಎಲ್ಲಾ ವಿಭಾಗಳಲ್ಲೂ ಪರಿಶೀಲನೆ ನಡೆಸಿದ್ದೇವೆ. ತಾಂತ್ರಿಕ ದೋಷದಿಂದ ಅಳತೆಯಲ್ಲಿ ವ್ಯತ್ಯಾಸ ಕಂಡು ಬಂದಿರುವುದು ಈ ಸಂದರ್ಭ ಕಂಡು ಬಂದಿದೆ. ಅಳತೆಯ ವ್ಯತ್ಯಾಸ ಬಿಟ್ಟರೆ ಈ ಪೆಟ್ರೋಲ್ ಪಂಪ್‌ನಲ್ಲಿ ಗುಣಮಟ್ಟ ಸೇರಿದಂತೆ ಬೇರಾವುದೇ ವಿಭಾಗದಲ್ಲಿ ನ್ಯೂನತೆ ಕಂಡು ಬಂದಿಲ್ಲ. ಪೆಟ್ರೋಲ್ ಪಂಪ್‌ಗಳಲ್ಲಿ ತೈಲದ ಗುಣಮಟ್ಟ ಹಾಗೂ ಅಳತೆಯಲ್ಲಿ ಏನಾದರೂ ವ್ಯತ್ಯಾಸಗಳಾದಲ್ಲಿ ಕೂಡಲೇ ಪೆಟ್ರೋಲ್ ಪಂಪ್ ಮಾಲಕರ ಗಮನಕ್ಕೆ ಅವರು ಸ್ಪಂದಿಸದಿದ್ದಲ್ಲಿ ಕಂಪೆನಿಗೆ ದೂರು ನೀಡಿ ಎಂದು ತಿಳಿಸಿದರು.
ಈ ಸಂದರ್ಭ ದೂರುದಾರ ಸೇರಿದಂತೆ ತಣ್ಣೀರುಪಂಥ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ್, ಸದಸ್ಯ ಅಯೂಬ್, ಬಾವಂತಬೆಟ್ಟು ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.