ಮಂಗಳೂರು : ಮನೆ ಬಾಗಿಲಿಗೆ ಮಲೇರಿಯಾ ಉಚಿತ ಸೇವೆ
ಮಂಗಳೂರು, ಮಾ. 18: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಜಂಟಿಯಾಗಿ ಮಲೇರಿಯಾ ನಿಯಂತ್ರಣಕ್ಕೆ ಹೊಸ ಹೆಜ್ಜೆಯಾಗಿ 24*7 ಮನೆ ಬಾಗಿಲಿಗೆ ಉಚಿತ ಸೇವೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಇಂದು ಮಹಾನಗರ ಪಾಲಿಕೆಯ ಎದುರು ಮನೆ ಬಾಗಿಲಿಗೆ ಉಚಿತ ಸೇವೆ ನೀಡುವ ಮೊಬೈಲ್ ಘಟಕಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅರುಣ್, ಆರೋಗ್ಯ ನಿರೀಕ್ಷಕ ಸುನಿಲ್ ಕುಮಾರ್, ಮನಪಾ ಆರೋಗ್ಯ ಸ್ಥಾಯೀ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
ಡಾ. ಅರುಣ್ ಮಾತನಾಡಿ, ಮಲೇರಿಯಾ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಪಾಲಿಕೆಯ ಸ್ಥಾಯಿ ಸಮಿತಿ ಜಂಟಿಯಾಗಿ ಈ ಹೆಜ್ಜೆಯನ್ನಿಟ್ಟಿದ್ದು, ಮಲೇರಿಯಾ ನಿಯಂತ್ರಣಕ್ಕೆ ನಾಗರಿಕರು ಸಹಕರಿಸಬೇಕೆಂದರು.
ಕಾರ್ಯಾಚರಣೆ ಹೇಗೆ ?
ಆರೋಗ್ಯ ಇಲಾಖೆಯ ಈ ನೂತನ ಸೇವೆಯಂತೆ ನಾಗರಿಕರು ತಮ್ಮ ಕುಟುಂಬ ಸದಸ್ಯರಿಗೆ ಜ್ವರ ಕಾಣಿಸಿಕೊಂಡರೆ 9448556872 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು. ಕರೆ ಸ್ವೀಕರಿಸುವ ಮೊಬೈಲ್ ಯುನಿಟ್(ಉಚಿತ ಸೇವೆ ನೀಡುವ ಓಮ್ನಿ ವಾಹನ)ನ ಸಿಬ್ಬಂದಿ ಕರೆ ಮಾಡಿದವರ ಮನೆ ಬಾಗಿಲಿಗೆ ಬಂದು ಅವರ ರಕ್ತದ ಮಾದರಿಯನ್ನು ಪಡೆದು ಪರೀಕ್ಷೆಗೊಳಪಡಿಸುತ್ತಾರೆ. ರಕ್ತ ಪರೀಕ್ಷೆಯ ವೇಳೆ ಮಲೇರಿಯಾದ ಲಕ್ಷಣಗಳು ಕಂಡುಬಂದಲ್ಲಿ ಈ ಯುನಿಟ್‌ನಿಂದ ಸ್ಥಳದಲ್ಲೇ ಉಚಿತ ವೈದ್ಯಕೀಯ ಸೇವೆ ಸಹಿತ ಉಚಿತ ಔಷಧಿಯನ್ನೂ ಒದಗಿಸಲಾಗುತ್ತದೆ. ಈ ಸೇವೆಯು ಮಂಗಳೂರು ಮಹಾನಗರ ಪಾಲಿಕೆಯ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು, ನಾಗರಿಕರಿಗೆ 24 ಗಂಟೆಗಳ ಕಾಲ ಸೇವೆ ಲಭ್ಯವಿದೆ.