ಮುಷ್ಕರ:300 ಟಾಟಾ ನ್ಯಾನೊ ನೌಕರರ ಬಂಧನ
ಅಹಮದಾಬಾದ್,ಮಾ.19: ತಮ್ಮ ಸಹಕಾರ್ಮಿಕರ ಅಮಾನತನ್ನು ಪ್ರತಿಭಟಿಸಿ ಶನಿವಾರ ಇಲ್ಲಿಯ ಸಾನಂದ ಕೈಗಾರಿಕಾ ಪ್ರದೇಶದಲ್ಲಿಯ ಟಾಟಾ ನ್ಯಾನೊ ಕಾರ್ಖಾನೆಯ ಹೊರಗೆ ಬಿಗು ಪೊಲೀಸ್ ಬಂದೋಬಸ್ತ್‌ನ ನಡುವೆಯೇ ಪ್ರತಿಭಟನೆ ನಡೆಸಲು ಗುಂಪುಗೂಡಿದ್ದ ಸುಮಾರು 300 ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕಾರ್ಮಿಕರು ಮುಷ್ಕರಕ್ಕೆ ಪೂರ್ವಾನುಮತಿ ಪಡೆದುಕೊಂಡಿರಲಿಲ್ಲ ಎಂದು ಅಹಮದಾಬಾದ್ ಗ್ರಾಮಾಂತರ ಡಿವೈಎಸ್‌ಪಿ ಪಿ.ಒ.ಭಟ್ ತಿಳಿಸಿದರು.
26 ಕಾರ್ಮಿಕರ ಅಮಾನತು ರದ್ದುಗೊಳಿಸುವ ಬಗ್ಗೆ ಕಂಪನಿಯೊಂದಿಗಿನ ಮಾತುಕತೆ ವಿಫಲಗೊಂಡ ಬಳಿಕ ಕಾರ್ಖಾನೆಯ ಹೊರಗೆ ಪ್ರತಿಭಟನಾ ರ್ಯಾಲಿ ನಡೆಸಲು ಕಾರ್ಮಿಕರು ಮುಂದಾಗಿದ್ದರು.
‘ಆಂತರಿಕ ಯೂನಿಯನ್’ಗೆ ಮಾನ್ಯತೆ ನೀಡಲು ಯಾವುದೇ ಸಮಸ್ಯೆಯಿಲ್ಲವೆಂದು ಟಾಟಾ ಮೋಟರ್ಸ್ ಹೇಳಿದೆ. ಆದರೆ ಅಮಾನತುಗೊಂಡಿರುವ ನೌಕರರನ್ನು ಮರುನೇಮಕ ಮಾಡಿಕೊಳ್ಳಬೇಕೆಂಬ ತಮ್ಮ ಮುಖ್ಯ ಬೇಡಿಕೆಯನ್ನು ಕಂಪನಿಯ ಆಡಳಿತ ವರ್ಗವು ಈಡೇರಿಸಿಲ್ಲ ಎಂದು ಕಾರ್ಮಿಕರು ತಿಳಿಸಿದ್ದಾರೆ.
ಸಹಕಾರ್ಮಿಕರ ಅಮಾನತು ರದ್ದುಗೊಳಿಸಬೇಕೆಂಬ ಬೇಡಿಕೆಯೊಡನೆ 422 ನೌಕರರು ಫೆ.22ರಿಂದ ಮುಷ್ಕರದಲ್ಲಿ ತೊಡಗಿದ್ದಾರೆ. ಮುಷ್ಕರವನ್ನು ಕಾನೂನುಬಾಹಿರ ಎಂದು ರಾಜ್ಯ ಸರಕಾರವು ಘೋಷಿಸಿದೆ.