ಸಂಘ ಪರಿವಾರದ ಕೋಮುವಾದಿ ತಂತ್ರ ಕ್ಕೆ ಸರಕಾರ ಮಣಿಯಬಾರದು -ಪ್ರಗತಿಪರ ಸಂಘಟನ
ಮಂಗಳೂರು.ಮಾ.19:ಪುತ್ತೂರು ಜಾತ್ರೆ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿಯಾಗಿರುವ ಎ.ಬಿ.ಇಬ್ರಾಹೀಂ ಅವರ ಹೆಸರನ್ನು ತೆಗೆಯಬೇಕು ಎಂದು ಒತ್ತಡ ಹೇರುತ್ತಿರುವ ಸಂಘಪರಿವಾರದ ತಂತ್ರಗಳಿಗೆ ಬಲಿಯಾಗಬಾರದು. ದೇಶದ ಸಂವಿಧಾನ ಬದ್ಧವಾದ ರೀತಿಯಲ್ಲಿ ಸರಕಾರಿ ಅಧಿಕಾರಿಗೆ ತಮ್ಮ ವ್ಯಾಪ್ತಿಯ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಭಾಗವಹಿಸುವ ಅಧಿಕಾರವಿದೆ. ಜಿಲ್ಲಾಧಿಕಾರಿಯ ಹೆಸರನ್ನು ಆಮಂತ್ರಣ ಪತ್ರಿಕೆಯಿಂದ ತೆಗೆಯ ಬೇಕು ಎಂದು ಒತ್ತಡ ಹೇರಿದರೆ ಪ್ರಗತಿ ಪರ ಸಂಘಟನೆಗಳಿಂದ ಬೀದಿಗಿಳಿದು ಹೋರಾಟ ನಡೆಸಬೇಕಾದೀತು.ಈ ರೀತಿ ಅಸಹಿಷ್ಣುತೆಯ ವಾತವರಣ ನಿರ್ಮಿಸಲು ಹೊರಟಿರುವವರ ವಿರುದ್ಧ ಸರಕಾರ ಕಠಿಣ ಕ್ರಮ ಕೈ ಗೊಳ್ಳಬೇಕು ಎಂದು ಸಂಘಟನೆಗಳ ಪರವಾಗಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂವಿಧಾನಕ್ಕೆ ಗೌರವ ನೀಡಿ:-ಪುತ್ತೂರು ಜಾತ್ರೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ರವರ ಹೆಸರು ಹಾಕಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ.ದೇಶದ ಜನ ಅನೋನ್ಯತೆಯಿಂದ ಜಾತಿ ಬೇಧ ಮರೆತು ಬದುಕ ಬೇಕು ಎನ್ನುವ ಆಶಯಕ್ಕೆ ;ಹಲವು ಕಡೆ ಹಿಂದು -ಮುಸಲ್ಮಾನರು ಜೊತೆಯಾಗಿ ದೇವಸ್ಥಾನಗಳ ಜಾತ್ರೆಯನ್ನು ನಡೆಸುವ,ಸಹಕಾರ ನೀಡುವ ಪರಂಪರೆಗೆ ಪುತ್ತೂರಿನ ಘಟನೆ ವಿರುದ್ಧವಾಗಿದೆ .ಸಂವಿಧಾನಕ್ಕೆ ಮೊದಲು ನಾವು ಗೌರವ ನೀಡಬೇಕಾಗಿದೆ ಎಂದು ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದೇವದಾಸ್ ತಿಳಿಸಿದ್ದಾರೆ.
ಸಂಘ ಪರಿವಾರದ ತಂತ್ರ:-ಜಿಲ್ಲೆಯಲ್ಲಿ 30ವರ್ಷಗಳ ಹಿಂದೆ ಬಹುತೇಕ ಎಲ್ಲಾ ಜಾತ್ರೆ ,ಕ್ರೈಸ್ತರ ,ಮುಸಲ್ಮಾನರ ಹಾಗೂ ಇತರ ಹಬ್ಬಗಳಲ್ಲಿ ಹಿಂದು ಮುಸಲ್ಮಾನರು ಪಾಲ್ಗೊಳ್ಳುತ್ತಿದ್ದರು. ಪ್ರಸಕ್ತ ಸಂಘ ಪರಿವಾರದ ತಂತ್ರಗಳಿಂದ ವಾತವರಣ ಬದಲಾಗಿದೆ. ಕೋಮುದ್ವೇಷದ ವಾತವರಣ ವಿಸ್ತಾರವಾಗಿದೆ.ಪುತ್ತೂರಿನ ಘಟನೆ ಈ ರೀತಿಯ ಸಂಘ ಪರಿವಾರದ ತಂತ್ರಗಾರಿಕೆಯಾಗಿದೆ.ಜನರು ಈ ರೀತಿಯ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಸಮುದಾಯ ಸಂಘಟನೆಯ ಸಂಚಾಲಕ ವಾಸುದೇವ ಉಚ್ಚಿಲ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಪ್ರಗತಿ ಪರ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.