ಬಿಜೆಪಿಯೇತರ ಸರಕಾರಗಳನ್ನು ಮೋದಿ,ಶಾ ಅಸ್ಥಿರಗೊಳಿಸುತ್ತಿದ್ದಾರೆ:ಕಾಂಗ್ರೆಸ್ ಆರೋಪ
ಹೊಸದಿಲ್ಲಿ,ಮಾ.19: ಉತ್ತರಾಖಂಡ್‌ನಲ್ಲಿಯ ಪಕ್ಷದ ಸರಕಾರವು ಬಿಕ್ಕಟ್ಟಿಗೆ ಸಿಲುಕಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್,ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಹಣದ ಆಮಿಷ ಮತ್ತು ರಾಜಕೀಯ ಅಧಿಕಾರದ ಮೂಲಕ ಬಿಜೆಪಿಯೇತರ ಸರಕಾರಗಳನ್ನು ಅಸ್ಥಿರಗೊಳಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಾಂಗ್ರೆಸ್‌ನ ಮುಖ್ಯವಕ್ತಾರ ರಣದೀಪ್ ಸುರ್ಜೆವಾಲಾ ಅವರು,ಒಳಸಂಚಿನಿಂದ ಪಕ್ಷವು ಹೆದರಿಕೊಂಡಿಲ್ಲ ಮತ್ತು ಸರಕಾರಕ್ಕೆ ಎದುರಾಗಿರುವ ಸವಾಲನ್ನು ನಿವಾರಿಸಲು ಎಲ್ಲ ಕಾನೂನು,ರಾಜಕೀಯ ಮತ್ತು ಸಂವಿಧಾನಾತ್ಮಕ ಕ್ರಮಗಳ ಬಗ್ಗೆ ಚರ್ಚಿಸಲಿದೆ ಎಂದು ಹೇಳಿದರು.
ಅಗತ್ಯ ಬಿದ್ದರೆ ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಿದ್ಧಪಡಿಸಲು ಹರೀಶ ರಾವತ್ ಸರಕಾರವು ಸಿದ್ಧವಿದೆ ಎಂದರು.
ಅರುಣಾಚಲ ಪ್ರದೇಶದ ಬಳಿಕ ಇದೀಗ ಉತ್ತರಾಖಂಡ್ ಎಂದ ಅವರು,ದಿಲ್ಲಿ ಮತ್ತು ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿನ ಸೋಲು ತಾನಿನ್ನು ಚುನಾವಣೆಗಳ ಮೂಲಕ ಯಾವುದೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಬಿಜೆಪಿಗೆ ಮನದಟ್ಟಾಗಿದೆ. ಹೀಗಾಗಿ ಅದು ಬಿಜೆಪಿಯೇತರ ಸರಕಾರಗಳನ್ನು ಅಸ್ಥಿರಗೊಳಿಸುತ್ತಿದೆ ಎಂದು ಹೇಳಿದರು.
ಎಲ್ಲ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿ ಶಾಸಕರಿಗೆ ಆಮಿಷವೊಡ್ಡಿ ತನ್ನತ್ತ ಸೆಳೆದುಕೊಳ್ಳುವುದು ಮೋದಿಯವರ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ರಾಜಕೀಯ ಸಂಸ್ಕೃತಿಯೇ ಎಂದು ಅವರು ಪ್ರಶ್ನಿಸಿದರು.
ಬಂಡುಕೋರ ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ತಾನು ಉತ್ತರಾಖಂಡ್ ವಿಧಾನಸಭೆಯಲ್ಲಿ ಬಹುಮತ ಹೊಂದಿರುವುದರಿಂದ ಸರಕಾರ ರಚನೆಗೆ ತನ್ನನ್ನು ಆಹ್ವಾನಿಸಬೇಕು ಎಂಬ ಬಿಜೆಪಿಯ ಹೇಳಿಕೆಯ ಬೆನ್ನಲ್ಲೇ ಸುರ್ಜೆವಾಲಾರ ಈ ಪ್ರತಿಕ್ರಿಯೆ ಹೊರಬಿದ್ದಿದೆ.