ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ - ಓರ್ವನ ಬಂಧನ
ಮಂಗಳೂರು, ಮಾ. 19: ನಗರದ ಕದ್ರಿ ಗ್ರಾಮದ ವ್ಯಾಸನಗರದಲ್ಲಿರುವ ಅಪಾರ್ಟ್‌ಮೆಂಟ್ ವೊಂದರಲ್ಲಿ ಕ್ರಿಕೆಟ್ ಬೆಟ್ಟಿಂಗ್‌ಗೆ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಎಲಿಯಾರಪದವು ಚರ್ಚ್ ಬಳಿಯ ಹೋಲಿ ಕ್ರಾಸ್ ವಿಲ್ಲ ನಿವಾಸಿ ಮೆಲ್ವಿನ್ ವಿಶ್ವಾಸ್(27) ಎಂದು ಗುರುತಿಸಲಾಗಿದೆ. ಬಂಧಿತನಿಂದ 3,02,700 ನಗದು, 1 ಮೊಬೈಲ್ ಫೋನ್, ಸೋನಿ ಎಲ್ಇಡಿ ಟಿವಿ ಹಾಗೂ ಬೆಟ್ಟಿಂಗ್ ವ್ಯವಹಾರಗಳ ಬಗ್ಗೆ ಬರೆದಿರುವ 1 ಲಾಂಗ್ ಬುಕ್ ಸಹಿತ ಒಟ್ಟು 3,35,000 ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿನ್ನೆ ನ್ಯೂಜಿಲ್ಯಾಂಡ್ ಮತ್ತು ಅಸ್ಟ್ರೇಲಿಯಾ ನಡುವೆ ನಡೆಯುತ್ತಿದ್ದ ವಿಶ್ವಕಪ್ 20-20 ಕ್ರಿಕೆಟ್ ಪಂದ್ಯಾವಳಿಯ ಸೋಲು ಗೆಲುವಿನ ಬಗ್ಗೆ ಕ್ರಿಕೆಟ್ ಬೆಟ್ಟಿಂಗ್ ಎಂಬ ಅಕ್ರಮ ಜೂಜಾಟವನ್ನು ನಡೆಸಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ. ಈ ಬಗ್ಗೆ ಮಂಗಳೂರು ನಗರ ಅಪರಾಧ ಪತ್ತೆ ವಿಭಾಗ(ಸಿಸಿಬಿ)ದ ಪೊಲೀಸರಿಗೆ ದೊರೆತ ಖಚಿತ ವರ್ತಮಾನದಂತೆ ಬೆಟ್ಟಿಂಗ್ ನಡೆಸುತ್ತಿದ್ದ ಅಪಾರ್ಟ್‌ಮೆಂಟ್‌ವೊಂದರ ಮನೆಗೆ ದಾಳಿ ನಡೆಸಿ ಮೆಲ್ವಿನ್ ವಿಶ್ವಾಸ್‌ನನ್ನು ಬಂಧಿಸಿದ್ದಾರೆ.
ಮೆಲ್ವಿನ್‌ನನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.