×
Ad

ಚಟುಕು ಸುದ್ದಿಗಳು

Update: 2016-03-19 23:27 IST

ಇಂದು ಮೆಲ್ಕಾರ್‌ನಲ್ಲಿ ಸೌಹಾರ್ದ ರಕ್ತದಾನ ಶಿಬಿರ
ವಿಟ್ಲ, ಮಾ.19: ಬಂಟ್ವಾಳ ತಾಲೂಕು ಸೋಲಿಡಾರಿಟಿ ಯೂತ್ ಮೂವ್‌ಮೆಂಟ್, ಮೆಲ್ಕಾರ್ ರಿಕ್ಷಾ ಚಾಲಕ-ಮಾಲಕರ ಸಂಘ, ಮಂಗಳೂರು ಕೆ.ಎಂ.ಸಿ. ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಸೌಹಾರ್ದ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಮಾ.20ರಂದು ಮೆಲ್ಕಾರ್ ಸರಾ ಆರ್ಕೆಡ್ ಬಳಿ ಬೆಳಗ್ಗೆ 9:30 ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ.

ಮೆಲ್ಕಾರ್ ಎಂ.ಸಿ.ಸಿ. ಬಾಯ್ಸಾ ಗೌರವಾಧ್ಯಕ್ಷ ರವಳನಾಥ ನಾಯಕ್ ಶಿಬಿರ ಉದ್ಘಾಟಿಸಲಿದ್ದು, ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಸದಸ್ಯ ಮುಬೀನ್ ಉಳ್ಳಾಲ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ನಾಳೆಯಿಂದ ಬೆಳರಿಂಗೆ ಧೂಮವತಿ ಬಂಟ ದೈವಗಳ ಪುನಃಪ್ರತಿಷ್ಠೆ
 ಉಳ್ಳಾಲ, ಮಾ.19: ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶ ಹಾಗೂ ಧರ್ಮನೇಮವು ಮಾ.21ರಿಂದ 26ರವರೆಗೆ ನಡೆಯಲಿದೆ ಎಂದು ಶ್ರೀಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಬಾಬು ಶಾಸ್ತಾ ಕಿನ್ಯಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಕಾರ್ಯಕ್ರಮದ ಪ್ರಯುಕ್ತ ಮಾ.21ರಂದು ಸಂಜೆ 3:30ಕ್ಕೆ ತಲಪಾಡಿ ಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರದಿಂದ ಹೊರಡುವ ಹಸಿರು ಹೊರೆಕಾಣಿಕೆಗೆ ವೇದಮೂರ್ತಿ ಬಾಲಕೃಷ್ಣ ಭಟ್ ಚಾಲನೆ ನೀಡುವರು. ಮಾ.22ರಂದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.23ರಂದು ವಿವಿಧ ಸಂಘ-ಸಂಸ್ಥೆಗಳಿಂದ ಭಜನಾ ಸೇವೆ, ಗಣಪತಿ ಯಾಗ, ಸಂಜೆ ಧಾರ್ಮಿಕ ಸಭೆ ನಡೆಯಲಿದೆ. ಮಾ.24ರಂದು ಬೆಳಗ್ಗೆ ಪುನಃ ಪ್ರತಿಷ್ಠೆ, ಬ್ರಹ್ಮಕಲಶ ಹಾಗೂ ಮಾ.26ರಂದು ಧರ್ಮನೇಮ ನಡೆಯಲಿದೆ. ಮಾ.24ರಂದು ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮ ದಲ್ಲಿ ನಿತ್ಯಾನಂದ ಯೋಗಾಶ್ರಮದ ಶ್ರೀಕ್ಷೇತ್ರ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸು ವರು. ಅಖಿಲ ಭಾರತ ಬಿಲ್ಲವರ ಯೂನಿಯನ್‌ನ ಅಧ್ಯಕ್ಷ ಕುದ್ರೋಳಿ ನವೀನ್‌ಚಂದ್ರ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದವರು ತಿಳಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಕೆ.ಟಿ.ಸುವರ್ಣ, ಕಾರ್ಯಾಧ್ಯಕ್ಷ ಕೆ.ಪಿ.ಸುರೇಶ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಕೋಶಾಧಿಕಾರಿ ವಾಮನ ಪೂಜಾರಿ ಬೆಳರಿಂಗೆ, ಉದ್ಯಮಿ ಭಾಸ್ಕರ್ ಉಪಸ್ಥಿತರಿದ್ದರು

ಅನಿಯಮಿತ ಲೋಡ್ ಶೆಡ್ಡಿಂಗ್ ವಿರುದ್ಧ ಆಯೋಗಕ್ಕೆ ದೂರು
ಉಡುಪಿ, ಮಾ.19: ಜಿಲ್ಲೆಯಲ್ಲಿ ಕಡು ಬೇಸಿಗೆ ದಿನಗಳು ಆರಂಭಗೊಳ್ಳುತಿದ್ದಂತೆ ಅನಿಯಮಿತ ವಿದ್ಯುತ್ ಕಡಿತ ಶುರುವಾಗಿದೆ. ರಾತ್ರಿ ಹೊತ್ತಿನಲ್ಲಿ ಮೆಸ್ಕಾಂ ಗರಿಷ್ಠ ಒಂದು ಗಂಟೆ ಮಾತ್ರ ವಿದ್ಯುತ್ ಕಡಿತ ಮಾಡಬಹುದೆಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸ್ಪಷ್ಟಪಡಿಸಿದ್ದರೂ, ಇತ್ತೀಚಿನ ದಿನಗಳಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ತಿಳಿಸಿದೆ.
ಯಾವುದೇ ವಿದ್ಯುತ್ ಕಡಿತಕ್ಕೆ ಆಯೋಗದ ಪೂರ್ವಾನುಮತಿ ಅಗತ್ಯವಿದ್ದರೂ, ವಿದ್ಯುತ್ ಉತ್ಪಾದನೆಯ ಕೊರತೆ ಕಾರಣ ನೀಡಿ, ಅನಿಯಮಿತ ವಿದ್ಯುತ್ ಕಡಿತ ಮಾಡುವುದು ಮೆಸ್ಕಾಂನ ಚಾಳಿಯಾಗಿದೆ ಎಂದು ಭಾಕಿಸಂ ಅಭಿಪ್ರಾಯಪಟ್ಟಿದೆ.
ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಟ್ ಇರ್ವತ್ತೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂಥ ವಿದ್ಯುತ್ ಕಡಿತದ ಕುರಿತು ಚರ್ಚಿಸಲಾಗಿದ್ದು, ಅನಿಯಮಿತ ವಿದ್ಯುತ್ ಕಡಿತದ ಬಗ್ಗೆ ಆಯೋಗಕ್ಕೆ ದೂರು ನೀಡಲು ತೀರ್ಮಾನಿಸಲಾಯಿತು.
ಶಾಲಾ ಪರೀಕ್ಷೆಗಳು ನಡೆಯುತ್ತಿರುವ ವೇಳೆ ರಾತ್ರಿ ವಿದ್ಯುತ್ ಕಡಿತ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದರೆ, ತೋಟಗಾರಿಕಾ ಬೆಳೆಗಳೇ ಹೆಚ್ಚಿನ ಪ್ರಮಾಣದಲ್ಲಿರುವ ಈ ಜಿಲ್ಲೆಯಲ್ಲಿ ಮರಗಳು ಹೂ ಬಿಟ್ಟು ಕಾಯಿ ಹಿಡಿಯುವ ಹಂತದಲ್ಲಿ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗದಿದ್ದರೆ ರೈತರ ಮುಂದಿನ ವರ್ಷದ ಬೆಳೆಯೇ ಕುಂಠಿತವಾಗಿ ನಷ್ಟ ಅನುಭವಿಸುವಂತಾಗುತ್ತದೆ ಎಂದು ಸಂಘ ಅಭಿಪ್ರಾಯಪಟ್ಟಿದೆ. ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಪಾಂಡುರಂಗ ಹೆಗ್ಡೆ, ರಾಮರಾವ್, ಭುಜಂಗ ಶೆಟ್ಟಿ, ಸುಂದರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸೂರಪ್ಪ ಭಂಡಾರಿ, ರಾಮಚಂದ್ರ ಅಲ್ಸೆ, ಸುಬ್ರಮಣ್ಯ ಐತಾಳ್ ರಾಘವೇಂದ್ರ ಕನ್ನಂತ ಮುಂತಾದವರು ಉಪಸ್ಥಿತರಿದ್ದರು ಎಂದು ಸಂಘದ ಪ್ರಕಟನೆ ತಿಳಿಸಿದೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ
ದ.ಕ.- 39, ಉಡುಪಿ 2 ಗೈರು ಮಂಗಳೂರು, ಮಾ.19: ದ.ಕ.ದಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೂರು ಪರೀಕ್ಷೆಗಳಲ್ಲಿ ಒಟ್ಟು 39 ಮಂದಿ ಗೈರು ಹಾಜರಾಗಿದ್ದಾರೆ.
ಸಂಖ್ಯಾಶಾಸ್ತ್ರ ಪರೀಕ್ಷೆಗೆ 5,890 ವಿದ್ಯಾರ್ಥಿಗಳು ಹಾಜರಾಗಿದ್ದು, 35 ಮಂದಿ ಗೈರಾಗಿದ್ದಾರೆ. ಐಚ್ಛಿಕ ಕನ್ನಡ ಪರೀಕ್ಷೆಗೆ 147 ಹಾಜರಿದ್ದು, 3 ಮಂದಿ ಗೈರು ಹಾಜ ರಾಗಿದ್ದಾರೆ.ಗೃಹವಿಜ್ಞಾನ ವಿಷಯದಲ್ಲಿ 23 ವಿದ್ಯಾಥಿಗಳು ಹಾಜರಾಗಿದ್ದು, ಒಬ್ಬ ವಿದ್ಯಾರ್ಥಿ ಗೈರು ಹಾಜರಾಗಿದ್ದಾನೆ ಎಂದು ಪ್ರಕಟನೆೆ ತಿಳಿಸಿದೆ. ಉಡುಪಿ: ಉಡುಪಿ ಜಿಲ್ಲೆಯ ಇಂದು ನಡೆದ ಮೂರು ಪರೀಕ್ಷೆಗಳಿಗೆ ಇಬ್ಬರು ವಿದ್ಯಾರ್ಥಿಗಳು ಗೈರುಹಾಜರಿದ್ದಾರೆ.
ಸಂಖ್ಯಾಶಾಸ್ತ್ರ ಪರೀಕ್ಷೆಗೆ 2,322 ಮಂದಿ ಪರೀಕ್ಷೆ ಬರೆದಿದ್ದು, ಓರ್ವ ಗೈರುಹಾಜರಾಗಿದ್ದಾನೆ. ಗೃಹ ವಿಜ್ಞಾನ ಪರೀಕ್ಷೆಗೆ ಓರ್ವ ವಿದ್ಯಾರ್ಥಿ ಹೆಸರು ನೋಂದಾಯಿಸಿಕೊಂಡಿದ್ದು, ಆತ ಗೈರುಹಾಜರಾಗಿದ್ದಾನೆ ಎಂದು ಪ್ರಕಟನೆ ತಿಳಿಸಿದೆ.

‘ಹರೀಶ್ ಯೋಜನೆ’ಗೆ ಆಸ್ಪತ್ರೆಗಳ ನೋಂದಣಿ
ಮಂಗಳೂರು, ಮಾ.19: ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆ ಯನ್ವಯ ರಸ್ತೆ ಅಪಘಾತಕ್ಕೊಳಗಾದ ವ್ಯಕ್ತಿಯ ಜೀವವನ್ನು ರಕ್ಷಿಸಲು ಮೊದಲ 48 ಗಂಟೆಗಳ ಅವಧಿಗೆ ರೂ. 25 ಸಾವಿರವರೆಗಿನ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸುತ್ತದೆ. ರಸ್ತೆ ಅಪಘಾತದ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸುವ ಸೌಲಭ್ಯಗಳನ್ನು ಹೊಂದಿರುವ ಆಸಕ್ತ ಆಸ್ಪತ್ರೆಗಳು, ಟ್ರಾಮ ಕೇಂದ್ರಗಳು ಸುವರ್ಣ ಆರೋಗ್ಯ ಟ್ರಸ್ಟ್‌ನೊಂದಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಆಸ್ಪತ್ರೆಗಳ ನೋಂದಣಿ ಕುರಿತ ಮಾಹಿತಿಗಾಗಿ ಡಿಡಿಡಿ.ಞ.ಚ್ಟ.್ಞಜ್ಚಿ.ಜ್ಞಿ, ಟೋಲ್ ಫ್ರೀ ಸಂಖ್ಯೆ 1800 425 8330 ಅಥವಾ 7259037902 ಅನ್ನು ಸಂಪರ್ಕಿಸಬಹುದಾಗಿದೆ. ಅರ್ಹ ಆಸ್ಪತ್ರೆಗಳು ಎಪ್ರಿಲ್ 23ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಪ್ರಕಟನೆ ತಿಳಿಸಿದೆ.

ಬೈಂದೂರು: ಸೆಬಿ ಕಾರ್ಯಾಗಾರ
ಉಡುಪಿ, ಮಾ.19: ಮೋಸ ಹೋಗುವವರು ಇರುವವರೆಗೂ ಮಾಡುವವರು ಇರುತ್ತಾರೆ. ಹೀಗಾಗಿ ಜಾಗರೂಕರಾಗಿರಬೇಕು. ಯುವ ಜನಾಂಗ ಕೇವಲ ದುಡಿದು, ಹಣ ಗಳಿಸಿದರೆ ಸಾಲದು. ಅದನ್ನು ಸದ್ವಿನಿಯೋಗ ಮಾಡಬೇಕು ಎಂದು ಆರ್ಥಿಕ ತಜ್ಞ, ನಿಟ್ಟೆಯ ಆಡಳಿತ ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಪ್ರೊ.ರಾಧಾಕೃಷ್ಣ ಶರ್ಮ ಹೇಳಿದರು.ಬೈಂದೂರು ಸರ ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಸೆಬಿ ಕಾರ್ಯಾಗಾರ’ದಲ್ಲಿ ಸಂಪ ನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಜೀವನದ ಕೊನೆಯ ಭಾಗದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗದಂತೆ ದುಡಿಯುವ ಹಂತದಲ್ಲಿಯೇ ಸರಿಯಾದ ಯೋಜನೆಯನ್ನು ರೂಪಿಸಿಕೊಂಡು ಮುನ್ನಡೆಯಬೇಕು. ಹಣದ ಹೂಡಿಕೆ ಮಾಡುವಾಗ ಎಲ್ಲೆಲ್ಲಿ, ಎಷ್ಟೆಷ್ಟು ಪ್ರಮಾಣದ ಬಂಡವಾಳವನ್ನು ತೊಡಗಿಸಬೇಕೆಂಬ ಸ್ಪಷ್ಟ ನಿರ್ಧಾರವಿರಬೇಕು. ಮಾರುಕಟ್ಟೆಯ ಲಾಭ-ನಷ್ಟಗಳ ಬಗ್ಗೆ ಸಂಪೂರ್ಣ ಚಿತ್ರಣವಿದ್ದರೆ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅವರು ನುಡಿದರು.ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಉಮೇಶ್ ಮಯ್ಯ ಕಾರ್ಯಾ ಗಾರ ಸಂಯೋಜಿಸಿದರು.

ಲೋಕಾಯುಕ್ತರಿಂದ ದೂರು ಸ್ವೀಕಾರ
ಉಡುಪಿ, ಮಾ.19: ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ವಿಚಾರಣೆ ಬಯಸುವ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ದೂರು ಅರ್ಜಿಗಳ ಪ್ರಪತ್ರಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಸ್ವೀಕರಿಸಲಾಗುವುದು.
ಮಾ.21ರಂದು ಬೆಳಗ್ಗೆ 11:30ರಿಂದ ಅಪರಾಹ್ನ 1ಗಂಟೆಯವರೆಗೆ ಉಡುಪಿ ಪ್ರವಾಸಿ ಮಂದಿರ, ಅಪರಾಹ್ನ 3ರಿಂದ 4:30ರವರೆಗೆ ಕಾರ್ಕಳ ಪ್ರವಾಸಿ ಮಂದಿರ ಹಾಗೂ ಮಾ.22ರಂದು ಬೆಳಗ್ಗೆ 11:30ರಿಂದ 1ರವರೆಗೆ ಕುಂದಾಪುರ ಪ್ರವಾಸಿ ಮಂದಿರದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಸಾರ್ವಜನಿಕರು ನಿಗದಿತ ದೂರು ಅರ್ಜಿಗಳಾದ ಪ್ರಪತ್ರ 1 ಮತ್ತು 2ನ್ನು ಪಡೆದು ಅಫಿದವಿತ್ ಮಾಡಿಸಿ, ಸಂಬಂಧಪಟ್ಟ ದಾಖಲೆಗಳ ಪ್ರತಿಗಳೊಂದಿಗೆ ದೂರು ಅರ್ಜಿಯನ್ನು ಸಲ್ಲಿಸಬಹುದು. ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಉಡುಪಿ ಘಟಕದ ಪೋಲಿಸ್ ಉಪಾಧೀಕ್ಷಕರು ಹಾಗೂ ಪೋಲಿಸ್ ನಿರೀಕ್ಷಕರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಪಟ್ರಮೆ: ಇಂದು ಉರೂಸ್ 
ಬೆಳ್ತಂಗಡಿ, ಮಾ.19: ಪಟ್ರಮೆ ಜುಮಾ ಮಸೀದಿ ಬಳಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಸೈಯದ್ ಅಬ್ದುಲ್ ಖಾದಿರ್ ಮಸ್ತಾನಿ ವಲಿಯಲ್ಲಾಹಿಯವರ 50ನೆ ಉರೂಸ್ ಮುಬಾರಕ್ ಮತ್ತು 10ನೆ ವಾರ್ಷಿಕ ಸ್ವಲಾತ್ ಮಜ್ಲಿಸ್ ಮಾ.20ರಂದು ನಡೆಯಲಿದೆ.
ಅಲ್ಹಾಜ್ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಉರೂಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಸ್ಸೈಯದ್ ಫಝಲ್ ಪೂಕೋಯಮ್ಮ ತಂಙಳ್ ಸ್ವಲಾತ್ ಮಜ್ಲಿಸ್‌ನ ನೇತೃತ್ವ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

ಇಂದು ಚೆರುಶ್ಶೇರಿ ಉಸ್ತಾದ್ ಅನುಸ್ಮರಣೆ 
ಮಂಜೇಶ್ವರ, ಮಾ.19: ಎಸ್ಕೆಎ ಸ್ಸೆಸ್ಸೆಫ್ ಪಾವೂರು ಯುನಿಟ್ ವತಿಯಿಂದ ಚೆರುಶ್ಶೇರಿ ಉಸ್ತಾದ್ ಅನುಸ್ಮರಣೆ ಹಾಗೂ ಸಮಸ್ತ ಸಮ್ಮೇಳನ ಮಾ.20ರಂದು ಸಂಜೆ 4ಕ್ಕೆ ಪಾವೂರು ಮರ್ಹೂಂ ಝೈನುಲ್ ಉಲಮಾ ನಗರ ದಲ್ಲಿ ನಡೆಯಲಿದೆ. ಬದ್ರುದ್ದೀನ್ ತಂಙಳ್ ಅಧ್ಯಕ್ಷತೆಯಲ್ಲಿ ಸೈಯದ್ ಕೆ.ಎಸ್.ಅಲಿ ತಂಙಳ್ ಕುಂಬೋಳ್ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.

ಬೈಲೂರು: ಇಂದು ಗ್ರಂಥಾಲಯ ಉದ್ಘಾಟನೆ
ಉಡುಪಿ, ಮಾ.19: ಬೈಲೂರು ವಾರ್ಡ್‌ನಲ್ಲಿ ಉಡುಪಿ ನಗರಸಭೆ ವತಿಯಿಂದ ನಿರ್ಮಿಸಲ್ಪಟ್ಟ ಶಾಖಾ ಗ್ರಂಥಾಲಯದ ಉದ್ಘಾಟನಾ ಸಮಾರಂಭ ಮಾ.20ರಂದು ಸಂಜೆ 4ಕ್ಕೆೆ ಭಾಗ್ಯ ಮಂದಿರದಲ್ಲಿ ನಡೆಯಲಿದೆ. ಶಾಸಕ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ವಿಶಾಲ್ ಅಧ್ಯಕ್ಷತೆ ವಹಿಸುವರು.

ನೀರಿನ ಮಿತ ಬಳಕೆಗೆ ಸೂಚನೆ
ಉಡುಪಿ, ಮಾ.19: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು ಬಾವಿಯ ಮೂಲಕ ಪೂರೈಸಲಾಗುತ್ತಿದ್ದು, ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಅಂತರ್ಜಲ ಮಟ್ಟ ಕುಸಿದಿರುವ ಕಾರಣ ನೀರಿನ ಅಭಾವದ ಪರಿಸ್ಥಿತಿ ಇದೆ. ಆದುದರಿಂದ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಲು ಹಾಗೂ ಗೃಹ ಬಳಕೆಗೆ ಮಾತ್ರ ಉಪಯೋಗಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟನೆಯಲ್ಲಿ ಕೋರಿದ್ದಾರೆ.
ಮಾ.23: ಮಂಗಳೂರಿನಲ್ಲಿ ಆಝಾದಿ ಮಾರ್ಚ್ ಮಂಗಳೂರು, ಮಾ.19:ದೇಶದ ಸ್ವಾತಂತ್ರ ಹೋರಾಟದಲ್ಲಿ ಬ್ರಿಟಿಷರಿಂದ ಗಲ್ಲು ಶಿಕ್ಷೆಗೆ ಗುರಿಯಾದ ಭಗತ್ ಸಿಂಗ್, ರಾಜ್‌ಗುರು ಹಾಗೂ ಸುಖದೇವ್ ಹತಾತ್ಮರಾದ ಮಾ.23ರಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದಿಂದ ಆಝಾದಿ ಮಾರ್ಚ್ (ಸ್ವಾತಂತ್ರದ ನಡಿಗೆ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಜೆ 3:30ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಪುರಭವನದ ವರೆಗೆ ವಿವಿಧ ಸಮಾನ ಮನಸ್ಕ ಸಂಘಟನೆಗಳ ಸ್ವಾತಂತ್ರದ ನಡಿಗೆ ಕಾರ್ಯಕ್ರಮ ನಡೆಯಲಿದೆ. ಬಳಿಕ 4:30ಕ್ಕೆ ಪುರಭವನದಲ್ಲಿ ಆಝಾದಿ ಸಮಾವೇಶ ನಡೆಯಲಿದೆ. ಇದರಲ್ಲಿ ಕೂಡಲ ಸಂಗಮ ಪಂಚಮ ಸಾಲಿ ಮಹಾಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಮುಖ್ಯಮಂತ್ರಿಯವರ ಸಲಹೆಗಾರ ದಿನೇಶ್ ಅಮೀನ್ ಮಟ್ಟು,ಪತ್ರಕರ್ತ ಸುದಿಪ್ತೋ ಮೊಂಡಲ್ ಮತ್ತಿತರರು ಪ್ರಮುಖರು ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಡಿವೈಎಫ್‌ಐ, ಎಸ್‌ಎಫ್‌ಐ, ಎಐವೈಎಫ್, ಎಐಎಸ್‌ಎಫ್, ಜೆಎಂಎಸ್, ಬಿವಿಎಸ್, ಅಭಿಮತ, ಅಂಬೇಡ್ಕರ್‌ವಾದ ಹಾಗೂ ಪ್ರೊ.ಕೃಷ್ಣಪ್ಪ ಸ್ಥಾಪಿತ ದಸಂಸ ಮಂಗಳೂರು, ಸಮುದಾಯ ಮಂಗಳೂರು, ದಲಿತ ಹಕ್ಕುಗಳ ಸಮನ್ವಯ ಸಮಿತಿ ಮಂಗಳೂರು ಸೇರಿದಂತೆ ದೇಶ ಪ್ರೇಮಿ ಸಂಘಟನೆಗಳ ಒಕ್ಕೂಟದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಮುನೀರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಾಸುದೇವ ಉಚ್ಚಿಲ್, ಎಂ.ದೇವದಾಸ್, ರಘು ಎಕ್ಕಾರ್, ವಿಶು ಕುಮಾರ್, ದಯಾನಂದ ಶೆಟ್ಟಿ, ಸಂತೋಷ್ ಬಜಾಲ್, ನಿತಿನ್‌ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಇಂದು ಸಲಫಿ ಸಮಾವೇಶ
ಮಂಗಳೂರು, ಮಾ.19: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ವತಿಯಿಂದ ಮಾ.20ರಂದು ಮಧ್ಯಾಹ್ನ 1:30ರಿಂದ ರಾತ್ರಿ 9:30ರವರೆಗೆ ಫರಂಗಿಪೇಟೆ ಸಲಫಿ ಮಸೀದಿ ವಠಾರದಲ್ಲಿ ಸಲಫಿ ಸಮಾವೇಶ ನಡೆಯಲಿದೆ.
ಮಧ್ಯಾಹ್ನ 1:30ರಿಂದ ಸಂಜೆ 4ರವರೆಗೆ ನಡೆಯುವ ಮಹಿಳಾ ಸಮಾವೇಶ ನಡೆಯಲಿದೆ. ಸಂಜೆ 4:30ರಿಂದ ರಾತ್ರಿ 9:30ರವರೆಗೆ ನಡೆಯುವ ಸಮಾವೇಶದಲ್ಲಿ ವೌಲವಿ ಸಜ್ಜಾದ್ ಸಖಾಫಿ, ವೌಲವಿ ನಾಸಿರುದ್ದೀನ್ ರಹ್ಮಾನಿ ಮತ್ತು ವೌಲವಿ ಮುಜೀಬ್ ತಚ್ಚಂಬಾರ ಪ್ರವಚನ ನೀಡಲಿದ್ದಾರೆ. ಸಲಫಿ ಮೂವ್‌ಮೆಂಟ್‌ನ ಕೇಂದ್ರೀಯ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಸಮಾವೇಶ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.

ಶಂಸುಲ್ ಉಲಮಾ ಕಾಲೇಜಿನ ವಾರ್ಷಿಕ ಇಂದಿನಿಂದ ಪುತ್ತೂರಿನಲ್ಲಿ ವಾಹನ ಜಾಥಾ
ಪುತ್ತೂರು, ಮಾ.19: ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜಿನ 6ನೆ ವಾರ್ಷಿಕೋ ತ್ಸವವು ಮಾ.26, 27ರಂದು ನಡೆಯಲಿದೆ. ಈ ಪ್ರಯುಕ್ತ ಮಾ.20 ಮತ್ತು 21ರಂದು ಪುತ್ತೂರಿನಲ್ಲಿ ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತೋಡಾರು ಸಂಸ್ಥೆಯ ಪುತ್ತೂರು ತಾಲೂಕು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಅಹ್ಮದ್ ನಈಂ ಮುಕ್ವೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಾ.20ರಂದು ಈಶ್ವರಮಂಗಲದ ಮೇನಾಲ ದರ್ಗಾದಲ್ಲಿ ಜಾಥಾ ಉದ್ಘಾಟನೆಗೊಳ್ಳಲಿದ್ದು, ಬಪ್ಪಳಿಗೆಯಲ್ಲಿ ಸಮಾಪನಗೊಳ್ಳಲಿದೆ. ಮಾ.21ರಂದು ಸವಣೂರಿನಿಂದ ಪ್ರಾರಂಭ ಗೊಂಡು ಸುಂಕದಕಟ್ಟೆಯಲ್ಲಿ ಸಮಾರೋಪ ಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಾಥಾ ಸಂಚಾಲಕ ಉಮರ್ ದಾರಿಮಿ ಸಾಲ್ಮರ, ತೋಡಾರು ಉಸ್ವತುಲ್ ಉಲಮಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಹನೀಫಿ, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸ್ವಾಬಿರ್ ಈಶ್ವರಮಂಗಲ ಮತ್ತು ಶಮ್ಸ್ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಲುಕ್ಮಾನುಲ್ ಹಕೀಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News