ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆ ಅಗತ್ಯ: ಕಾಣಿಯೂರು ಶ್ರೀ
ಉಡುಪಿ, ಮಾ.19: ಇಂದು ಜನ ರಲ್ಲಿ ಸಮಾಜಮುಖಿ ಚಿಂತನೆ ಕಡಿಮೆಯಾಗುತ್ತಿದೆ. ಶಿಕ್ಷಣ ಪಡೆ ಯುವುದು ಅಂತಿಮವಾಗಿ ಹಣ ಗಳಿಸುವ ಉದ್ದೇಶದಿಂದಲೇ ಎಂಬ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆದಿದೆ. ಇದರಿಂದ ವಿದ್ಯಾರ್ಥಿಗಳು ಹೊರಬಂದು ಸಮಾಜಮುಖಿ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಹಾಗೂ ಉಡುಪಿ ಯಕ್ಷಗಾನ ಕಲಾರಂಗದ ಸಹಯೋಗದೊಂದಿಗೆ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕದ 300 ವಿದ್ಯಾರ್ಥಿಗಳ ಶೈಕ್ಷಣಿಕ ಸನಿವಾಸ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಆಶೀವರ್ಚನ ನೀಡಿದರು.
ಅಧ್ಯಕ್ಷತೆಯನ್ನು ದೇವಳದ ಧರ್ಮ ದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ವಿದ್ಯಾಂಗ ಉಪನಿರ್ದೇಶಕ ಎಚ್. ದಿವಾಕರ ಶೆಟ್ಟಿ, ಸಂತೆಕಟ್ಟೆಯ ಸಾಮಾಜಿಕ ಕಾರ್ಯಕರ್ತರಾದ ಕರ್ನಲ್ ರಾಮಚಂದ್ರ ರಾವ್, ಮಾಲತಿ ರಾಮಚಂದ್ರರಾವ್, ನಿವೃತ್ತ ಪ್ರಾಂಶುಪಾಲ ಬಿ.ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಲಾರಂಗದ ಅಧ್ಯಕ್ಷ ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.