ಸುಳ್ಯ: ಪಯಸ್ವಿನಿ ನದಿಯಲ್ಲಿ ಸ್ನಾನಕ್ಕಿಳಿದ ಯುವಕ ಮೃತ್ಯು
Update: 2016-03-20 16:20 IST
ಸುಳ್ಯ: ಪಯಸ್ವಿನಿ ನದಿಯಲ್ಲಿ ಸ್ನಾನಕ್ಕೆಂದು ಬಂದಿದ್ದ ಯುವಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಪೈಚಾರಿನಲ್ಲಿ ಸಂಭವಿಸಿದೆ. ಸುಳ್ಯ ಸಮೀಪದ ಶಾಂತಿನಗರ ಬೆಟ್ಟಂಪಾಡಿ ನಿವಾಸಿ ಮಹಾಲಿಂಗ ಪಾಟಾಳಿಯವರ ಪುತ್ರ ಚಂದ್ರಶೇಖರ ಮೃತಪಟ್ಟ ಯುವಕ. 28 ವರ್ಷ ವಯಸ್ಸಾಗಿತ್ತು. ಚಂದ್ರಶೇಖರರು ತನ್ನ ಮಿತ್ರರಾದ ಹರೀಶ್ ಮತ್ತು ಮಧುಸೂದನ್ ಅವರೊಂದಿಗೆ ಭಾನುವಾರ ಅಪರಾಹ್ನ ಪೈಚಾರು ಬಳಿ ಪಯಸ್ವಿನಿ ನದಿಯಲ್ಲಿ ಸ್ನಾನಕ್ಕೆಂದು ಬಂದಿದ್ದರು. ಈ ವೇಳೆ ಚಂದ್ರಶೇಖರ್ ನೀರಲ್ಲಿ ಮುಳುಗಿ ಅಪಾಯದಲ್ಲಿ ಸಿಲುಕಿದಾಗ ಇತರರು ಓಡಿ ಹೋಗಿ ಪೈಚಾರಿನಲ್ಲಿದ್ದ ರಿಕ್ಷಾ ಚಾಲಕ ಇಬ್ರಾಹಿಂ ಅವರಿಗೆ ವಿಷಯ ತಿಳಿಸಿದರು. ಇಬ್ರಾಹಿಂ ರವರು ಕೂಡಲೇ ಮುಳುಗು ತಜ್ಷರಾದ ಅಬ್ದುಲ್ಲ ಶಾಂತಿನಗರ, ಲತೀಫ್ ಪೈಚಾರ್, ಅರ್ಶದ್, ಅಬ್ಬಾಸ್ ಅವರಿಗೆ ಫೋನ್ ಮೂಲಕ ವಿಷಯ ತಿಳಿಸಿದಾಗ ಅವರು ಕೂಡಲೇ ಧಾವಿಸಿ ಬಂದು ಚಂದ್ರಶೇಖರರನ್ನು ಮೇಲೆತ್ತಿದರಾದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.