ಸೆಂಟ್ರಲ್ ಮಾರ್ಕೆಟ್ ಬಳಿ ಹತ್ಯೆ ಪ್ರಕರಣ : ಇಬ್ಬರ ಬಂಧನ
ಮಂಗಳೂರು, ಮಾ. 20:ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ಮಾ.28 ರಾತ್ರಿ ಯಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಇಂದು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಶೇಖರ್.ಎಂ ಹೇಳಿದರು.
ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಬಂಧಿತರನ್ನು ಪುತ್ತೂರಿನ ಚಿಕ್ಕಮೂಡ್ನೂರು ಗ್ರಾಮದ ಪ್ರಸಕ್ತ ಪಂಪ್‌ವೆಲ್ ಕಪಿತಾನಿಯೋ ಶಾಲೆಯ ಬಳಿಯ ನಾಗುರಿ ರಸ್ತೆಯ ಸೈಮನ್ ಓಣಿಯ ನಿವಾಸಿ ವೃತ್ತಿಯಲ್ಲಿ ಪೈಂಟರ್ ಆಗಿರುವ ರವಿ ಯಾನೆ ರವೀಂದ್ರ ಸಾಲಿಯನ್(35), ದಾವಣಗೆರೆ ಹರಿಹರ ತಾಲೂಕಿನ ನಿವಾಸಿ ವೃತ್ತಿಯಲ್ಲಿ ಕೂಲಿಕೆಲಸ ಮಾಡುವ ನವೀನ(20) ಎಂದು ಗುರುತಿಸಲಾಗಿದೆ ಎಂದು ಹೇಳಿದರು.
ಆರೋಪಿಗಳಿಗೆ ಹಣಕಾಸಿನ ವಿಚಾರದಲ್ಲಿ ಹತ್ಯೆಯಾದ ಜಯಾನಂದ ಅವರೊಂದಿಗೆ ಮನಸ್ತಾಪವಿತ್ತು. ಆರೋಪಿಗಳು ಹತ್ಯೆಯಾದ ಜಯಾನಂದ ಅವರಿಗೆ ಮದ್ಯ ಕುಡಿಸಿ ಸೆಂಟ್ರಲ್ ಮಾರುಕಟ್ಟೆಗೆ ಕರೆತಂದಿದ್ದು ಅಲ್ಲಿ ತರಕಾರಿ ಅಂಗಡಿಯೊಂದರ ಬಳಿ ಅವರನ್ನು ಹತ್ಯೆ ಮಾಡಿದರು ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಹತ್ಯೆಯಾದ ಐದು ದಿನದವರೆಗೆ ಹತ್ಯೆಯಾದ ವ್ಯಕ್ತಿಯನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಮೃತ ವ್ಯಕ್ತಿಯನ್ನು ವಾಮಂಜೂರು ಮೂಡುಶೆಡ್ಡೆ ಬಳಿಯ ಜಯಾನಂದ ಎಂದು ಗುರುತಿಸಿದ ನಂತರ ಆರೋಪಿಗಳ ಪತ್ತೆ ಕಾರ್ಯ ನಡೆಯಿತು. ಘಟನಾ ಸ್ಥಳದಲ್ಲಿ ತನಿಖೆಗೆ ಬೇಕಾದ ಮಹತ್ವದ ಸುಳಿವು ಸಿಗದೆ ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಪಡಟಬೇಕಾಯಿತು. ಆದರೆ ದೊರೆತ ಸಣ್ಣ ಸಣ್ಣ ಕುರುಹುಗಳನ್ನು ಇಟ್ಟುಕೊಂಡು ಮಾಡಿದ ತನಿಖೆಯಿಂದ ಆರೋಪಿಗಳ ಪತ್ತೆ ಸಾಧ್ಯವಾಗಿದೆ ಎಂದು ಹೇಳಿದರು.
ಉತ್ತರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತಾರಾಮ, ಸಿಬ್ಬಂದಿಗಳಾದ ರಾಜೇಶ್ ಆಳ್ವ, ಸುಜನ್ ಶೆಟ್ಟಿ, ಗೋವರ್ಧನ್ ಇವರುಗಳ ತಂಡ ಆರೋಪಿಗಳ ಪತ್ತೆ ಮಾಡಿದೆ. ಜೊತೆಗೆ ಈ ಪ್ರಕರಣದ ಬಗ್ಗೆ ಮಹತ್ವದ ಮಾಹಿತಿಯನ್ನು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಎಸ್‌ಐ ವಸಂತ್ ನೀಡಿದ್ದಾರೆ. ಹತ್ಯೆಯಾದ ವ್ಯಕ್ತಿಯೊಂದಿಗೆ ಇದ್ದ ಆರೋಪಿಗಳನ್ನು ಗಮನಿಸಿ ಅವರು ಮಾಹಿತಿ ನೀಡಿದ್ದರು. ಪತ್ತೆಕಾರ್ಯದಲ್ಲಿ ಭಾಗಿಯಾದ ಪೊಲೀಸ್ ಸಿಬ್ಬಂದಿಗಳಿಗೆ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ್ ಎಂ.ಪಾಟೀಲ್ ಉಪಸ್ಥಿತರಿದ್ದರು.