ವಲಸಿಗರಿಗೆ ದಯೆತೋರಿ : ಯುರೋಪಿಯನ್ ರಾಷ್ಟ್ರಗಳಿಗೆ ಪೋಪ್ ಕರೆ
ವೆಟಿಕನ್,ಮಾ.20: ಯುರೋಪ್‌ಗೆ ಪ್ರವಾಹದಂತೆ ಹರಿದುಬರುತ್ತಿರುವ ನಿರಾಶ್ರಿತರ ಬಗ್ಗೆ ಯುರೋಪ್‌ನ ಕೆಲವು ರಾಷ್ಟ್ರಗಳು ಕಠಿಣ ನಿಲುವು ಅನುಸರಿಸುತ್ತಿರುವುದನ್ನು ಪೋಪ್ ಫ್ರಾನ್ಸಿಸ್ ರವಿವಾರ ತೀವ್ರವಾಗಿ ಖಂಡಿಸಿದ್ದಾರೆ. ವಲಸಿಗರ ಬಗ್ಗೆ ಯುರೋಪಿಯನ್ ಸರಕಾರಗಳು ನಿರ್ದಯೆಯಿಂದ ವರ್ತಿಸುತ್ತಿರುವುದನ್ನು ಅವರು ಯೇಸುಕ್ರಿಸ್ತನನ್ನು ಶಿಲುಬೆಗೇರಿಸುವಾಗ ನಿರ್ದಯರಾಗಿ ವರ್ತಿಸಿದ ಅಧಿಕಾರಿಗಳಿಗೆ ಹೋಲಿಸಿದ್ದಾರೆ. ಪಾಮ್‌ಸಂಡೇ ದಿನದ ಅಂಗವಾಗಿ ವೆಟಿಕನ್‌ನಲ್ಲಿ ರವಿವಾರ ಬಹಿರಂಗ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ನೆರೆದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು ಸಿರಿಯ, ಇರಾಕ್, ಆಫ್ರಿಕಾ ಮತ್ತಿತರ ದೇಶಗಳಿಂದ ಯುದ್ಧ,ದೌರ್ಜನ್ಯ ಹಾಗೂ ಬಡತನ ಬವಣೆಯಿಂದ ಪಾರಾಗಲು ಯುರೋಪ್‌ಗೆ ಹರಿದುಬರುತ್ತಿರುವ ವಲಸಿಗರ ಬಗ್ಗೆ ಯುರೋಪ್ ಉದಾರ ನಿಲುವನ್ನು ತಾಳಬೇಕೆಂದು ಕರೆ ನೀಡಿದರು.
ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಯುರೋಪ್ ಒಕ್ಕೂಟದ ಸಮುದ್ರ ತೀರಗಳಿಗೆ ತಲುಪಿದ 10 ಲಕ್ಷಕ್ಕೂ ಅಧಿಕ ನಿರಾಶ್ರಿತರ ಹೊಣೆಯನ್ನು ವಹಿಸಿಕೊಳ್ಳಲು ಕೆಲವು ಯುರೋಪಿಯನ್ ದೇಶಗಳು ನಿರಾಕರಿಸುತ್ತಿರುವ ಸನ್ನಿವೇಶವನ್ನು ಅವರು ಯೇಸುಕ್ರಿಸ್ತನ ಬದುಕಿನೊಂದಿಗೆ ಹೋಲಿಸಿದರು.
‘‘ಯೇಸುಕ್ರಿಸ್ತನಿಗೂ ನ್ಯಾಯವನ್ನು ನಿರಾಕರಿಸಲಾಗಿತ್ತು ಹಾಗೂನಿರ್ದಯೆಯನ್ನು ತೋರಲಾಗಿತ್ತು. ಯಾಕೆಂದರೆ ಆತನ ವಿಧಿಯ ಬಗ್ಗೆ ಹೊಣೆಹೊತ್ತುಕೊಳ್ಳಲು ಯಾರೂ ತಯಾರಿರಲಿಲ್ಲವೆಂದು ಪೋಪ್ ಹೇಳಿದರು.
ಸಾಮೂಹಿಕ ಪ್ರಾರ್ಥನೆಯ ಬಳಿಕ ಪೋಪ್ ಫ್ರಾನ್ಸಿಸ್, ಸೈಂಟ್ ಪೀಟರ್ ಚೌಕದಲ್ಲಿ ಬಿಳಿಬಣ್ಣದ ವಾಹನದಲ್ಲಿ ಸಂಚರಿಸುತ್ತಾ ಪಾಮ್‌ಸಂಡೇ ಶುಭಾಶಯಗಳನ್ನು ಕೋರಿದರು.