ಐಸಿಸ್ ಭದ್ರಕೋಟೆಗೆ ರಶ್ಯ ದಾಳಿ; 39 ನಾಗರಿಕರ ಬಲಿ
ಬೈರೂತ್,ಮಾ.20: ಸಿರಿಯದಲ್ಲಿ ಐಸಿಸ್ ಉಗ್ರರ ಭದ್ರಕೋಟೆಯಾದ ರಖ್ಖಾದಲ್ಲಿ ಶನಿವಾರ ರಶ್ಯನ್ ಪಡೆಗಳು ನಡೆಸಿದ ಸರಣಿ ವಾಯುದಾಳಿಗಳಲ್ಲಿ ಕನಿಷ್ಠ 39 ಮಂದಿ ನಾಗರಿಕರು ಸಾವನ್ನಪ್ಪಿರುವುದಾಗಿ, ಅಂತಾರಾಷ್ಟ್ರೀಯ ನಿಗಾ ಸಮಿತಿಯೊಂದು ವರದಿ ಮಾಡಿದೆ.
ಸಿರಿಯದ ಉತ್ತರ ಭಾಗದಲ್ಲಿರುವ ರಖ್ಖಾ ನಗರವನ್ನು ಐಸಿಸ್ ತನ್ನ ತಥಾಕಥಿತ ರಾಜಧಾನಿಯೆಂದು ಘೋಷಿಸಿಕೊಂಡಿದೆ. ಬಲಿಯಾದವರಲ್ಲಿ ಕನಿಷ್ಠ ಐವರು ಮಕ್ಕಳು ಹಾಗೂ ಏಳು ಮಹಿಳೆಯರು ಕೂಡಾ ಸೇರಿದ್ದಾರೆಂದು ಬ್ರಿಟನ್ ಮೂಲದ ‘ಮಾನವಹಕ್ಕುಗಳ ಕುರಿತಾದ ಸಿರಿಯನ್ ವೀಕ್ಷಣಾಲಯ’ ಪ್ರಕಟಿಸಿದೆ.
ದಾಳಿಯಲ್ಲಿ ಐಸಿಸ್‌ನ ಸ್ವಯಂಘೋಷಿತ ಪೊಲೀಸ್ ಪಡೆಯ ಐವರು ಸದಸ್ಯರು ಮೃತಪಟ್ಟಿದ್ದು, 60 ಮಂದಿ ಗಾಯಗೊಂಡಿದ್ದ್ಜಾರೆ. ಅವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದೆಯೆಂದು ಮೂಲಗಳು ತಿಳಿಸಿವೆ.
ಇತ್ತೀಚಿನ ವಾರಗಳಲ್ಲಿ ರಶ್ಯದ ವಾಯುಪಡೆಯ ಬೆಂಬಲದೊಂದಿಗೆ ಸಿರಿಯದ ಸರಕಾರಿ ಪಡೆಗಳು ಪುರಾತನ ನಗರವಾದ ರಖ್ಖಾದ ಮರುಸ್ವಾಧೀನಕ್ಕಾಗಿ ದಾಳಿಗಳನ್ನು ನಡೆಸುತ್ತಿವೆ. ಶನಿವಾರ ಪಾಲ್ಮಿರಾ ಪ್ರದೇಶದಲ್ಲಿ ರಶ್ಯದ ವಾಯುದಾಳಿಗೆ 18 ಮಂದಿ ಐಸಿಸ್ ಉಗ್ರರು ಬಲಿಯಾಗಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ಸಿರಿಯನ್ ಆಡಳಿತದ ಪ್ರಮುಖ ಬೆಂಬಲಿಗ ದೇಶವಾದ ರಶ್ಯವು ಕಳೆದ ಸೋಮವಾರ ಸಿರಿಯದಿಂದ ತನ್ನ ಬಹುತೇಕ ಪಡೆಗಳನ್ನು ವಾಪಸ್ ಕರೆಸಿಕೊಂಡಿದೆಯಾದರೂ, ಐಸಿಸ್ ನೆಲೆಗಳ ಮೇಲೆ ತನ್ನ ದಾಳಿಗಳನ್ನು ಮುಂದುವರಿಸಿದೆ.