ಟ್ರಂಪ್ ವಿರುದ್ಧ ಮತ್ತೆ ಪ್ರತಿಭಟನೆಯ ಕಿಡಿ
ವಾಶಿಂಗ್ಟನ್, ಮಾ.20: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಶನಿವಾರ ಅರಿರೆನಾ ಪ್ರಾಂತ್ಯದ ಪ್ರಮುಖ ರಸ್ತೆಯೊಂದರಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ಟ್ರಂಪ್ ಅವರ ಚುನಾವಣಾ ಪ್ರಚಾರ ರ್ಯಾಲಿಗೆ ಅಡ್ಡಿಪಡಿಸಲು ಯತ್ನಿಸಿದಾಗ, ಪೊಲೀಸರು ಅವರಲ್ಲಿ ಕೆಲವರನ್ನು ವಶಕ್ಕೆ ತೆಗೆದುಕೊಂಡರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅರಿರೆನಾದ ಟ್ಯುಸ್ಕನ್ ನಗರದಲ್ಲಿ ‘ಟ್ರಂಪ್‌ರಿಂದ ಅಮೆರಿಕಕ್ಕೆ ಕೆಡುಕು’ ಎಂಬ ಭಿತ್ತಿಪತ್ರವನ್ನು ಹಿಡಿದಿದ್ದ ಪ್ರತಿಭಟನಕಾರನೊಬ್ಬನನ್ನು ಟ್ರಂಪ್ ಬೆಂಬಲಿಗರು ಹಿಗ್ಗಾಮಗ್ಗಾ ಥಳಿಸಿದ್ದಾರೆ. ಆಗ ಮಧ್ಯಪ್ರವೇಶಿಸಿದ ಭದ್ರತಾ ಸಿಬ್ಬಂದಿ ಆತನನ್ನು ಸ್ಥಳದಿಂದ ಹೊರಗೆ ಕರೆದೊಯ್ದರೆಂದು, ಎನ್‌ಬಿಸಿ ಟಿವಿ ವಾಹಿನಿಯು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ ವಿಡಿಯೋದಲ್ಲಿ ತೋರಿಸಲಾಗಿದೆ.ಟ್ರಂಪ್ ಅವರ ಜನಾಂಗೀಯವಾದಿ ಹಾಗೂ ಮುಸ್ಲಿಂ ವಿರೋಧಿ ನಿಲುವಿನ ವಿರುದ್ಧ ಅಮೆರಿಕದ ವಿವಿಧೆಡೆ ನಾಗರಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಮಧ್ಯೆ ನ್ಯೂಯಾರ್ಕ್‌ನಲ್ಲಿಯೂ ಶನಿವಾರ ಟ್ರಂಪ್ ವಿರುದ್ಧ ಪ್ರತಿಭಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಮಹಾನಗರದ ಮ್ಯಾನ್‌ಹಟ್ಟನ್ ಕೊಲಂಬಿಯಾ ಜಮಾಯಿಸಿದ ಪ್ರತಿಭಟನಕಾರರು, ‘‘ ಟ್ರಂಪ್ ತೊಲಗು’’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಟ್ರಂಪ್ ಸ್ತ್ರೀವಿರೋಧಿ ಹಾಗೂ ಜನಾಂಗೀಯವಾದಿಯೆಂದು ಅವರು ನಿಂದಿಸಿದರು. ‘‘ಟ್ರಂಪ್‌ನನ್ನು ಗಡಿಪಾರು ಮಾಡಿ’’, ‘ಟ್ರಂಪ್ ಸುತ್ತ ಗೋಡೆ ನಿರ್ಮಿಸಿ’ ಎಂಬ ಘೋಷಣೆಗಳುಳ್ಳ ಭಿತ್ತಿಫಲಕಗಳನ್ನು ಕೂಡಾ ಅವರು ಪ್ರದರ್ಶಿಸಿದರು. ನ್ಯೂಯಾರ್ಕ್‌ನ ಪ್ರಸಿದ್ಧ ಫಿಫ್ತ್ ಅವೆನ್ಯೂ ಪ್ರದೇಶದಲ್ಲಿಯೂ ಟ್ರಂಪ್ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಹೊಕೈ ನಡೆದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಓರ್ವನನ್ನು ಬಂಧಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ‘ಕಾಸ್ಮೊಪಾಲಿಟನ್’ ಎಂಬ ಫ್ಯಾಶಿಸ್ಟ್ ವಿರೋಧಿ ಸಂಘಟನೆ ಈ ಪ್ರತಿಭಟನರ್ಯಾಲಿಯನ್ನು ಹಮ್ಮಿಕೊಂಡಿತ್ತು.