ಕರಾವಳಿಯಾದ್ಯಂತ ಶ್ರದ್ಧಾಭಕ್ತಿಯ ಪಾಮ್ ಸಂಡೆ ಆಚರಣೆ
ಉಡುಪಿ, ಮಾ.20: ಯೇಸುಕ್ರಿಸ್ತರು ಜೆರುಸಲೆಂ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅವರನ್ನು ಭಕ್ತರು ’ಒಲಿವ್’ ಮರದ ಗರಿಗಳನ್ನು ಹಿಡಿದು ಸ್ವಾಗತಿಸಿದ ಸಂಕೇತವಾಗಿ ರವಿವಾರ ‘ಪಾಮ್ ಸಂಡೆ’ ಯನ್ನು ಕ್ರೈಸ್ತ ಬಾಂಧವರು ಕರಾವಳಿ ಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಪೂಜೆಗೆ ಮೊದಲು ತೆಂಗಿನಗರಿಗಳನ್ನು ಚರ್ಚ್ ಆವರಣದಲ್ಲಿ ತಂದು ಆಶೀರ್ವದಿಸಲ್ಪಟ್ಟ ಬಳಿಕ ಅವುಗಳನ್ನು ಹಿಡಿದುಕೊಂಡು ಮೆರವಣಿಗೆಯ ಮೂಲಕ ತಮ್ಮ ಚರ್ಚ್‌ಗಳಿಗೆ ತೆರಳಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು. ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್‌ನಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ತೆಂಗಿನ ಗರಿಗಳನ್ನು ಆಶೀರ್ವದಿಸಿ ಸಂದೇಶ ನೀಡಿದರು. ಚರ್ಚಿನ ಪ್ರಧಾನ ಧರ್ಮಗುರು ವಂ.ಆಲ್ಬನ್ ಡಿಸೋಜ ಉಪಸ್ಥಿತರಿದ್ದರು.
ಉಡುಪಿ ನಗರದ ಶೋಕ ಮಾತಾ ಇಗರ್ಜಿಯಲ್ಲಿ ನಡೆದ ಪಾಮ್ ಸಂಡೆ ಆಚರಣೆಯ ನೇತೃತ್ವವನ್ನು ಚರ್ಚ್‌ನ ಪ್ರಧಾನ ಧರ್ಮಗುರು ವಂ.ಫ್ರೆಡ್ ಮಸ್ಕರೇನ್ಹಸ್ ವಹಿಸಿದ್ದರು. ಜಿಲ್ಲೆಯ ಶಿರ್ವ, ಉಡುಪಿ, ಕಲ್ಯಾಣಪುರ, ಸಾಸ್ತಾನ ಸಹಿತ ಎಲ್ಲಾ ಚರ್ಚ್‌ಗಳಲ್ಲಿ ಪಾಮ್ ಸಂಡೆಯನ್ನು ಆಚರಿಸಲಾಯಿತು.
ಕಾಸರಗೋಡು: ಮಂಗಳೂರು ಧರ್ಮಪ್ರಾಂತಕ್ಕೆ ಒಳಪಡುವ ಕಾಸರಗೋಡು ವಲಯದ ಚರ್ಚ್ ಗಳ ಸಹಿತ ಕಾಸರಗೋಡು ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲೂ ಗರಿಗಳ ರವಿವಾರ ವಿಶೇಷ ಪ್ರಾರ್ಥನೆಯೊಂ ದಿಗೆ ನಡೆಯಿತು. ಕಯ್ಯಾರು ಕ್ರಿಸ್ತ ರಾಜ ಚರ್ಚ್‌ನಲ್ಲಿ ವಂ.ವಿಕ್ಟರ್ ಡಿಸೋಜ ಆಶೀರ್ವಚನ ನೆರವೇರಿಸಿದರು.
ದ.ಕ.: ಮಂಗಳೂರಿನ ರೊಸಾರಿಯೊ ಚರ್ಚ್, ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಚರ್ಚ್, ಸುಳ್ಯ- ಕಲ್ಲುಗುಂಡಿಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಸೇರಿದಂತೆ ದ.ಕ. ಜಿಲ್ಲೆಯ ವಿವಿಧೆಡೆ ಚರ್ಚ್‌ಗಳಲ್ಲಿ ಪಾಮ್ ಸಂಡೆ ಆಚರಣೆ ನಡೆಯಿತು.
ಗುರುವಾರ ಯೇಸುಕ್ರಿಸ್ತರ ಕೊನೆಯ ಭೋಜನದ ದಿನ, ಶುಕ್ರವಾರ ಯೇಸು ಕ್ರಿಸ್ತರು ಶಿಲುಬೆಗೇರಿಸಿದ ದಿನ, ಶನಿವಾರ ರಾತ್ರಿ ಜಾಗರಣೆ ಮತ್ತು ರವಿವಾರ ಯೇಸುಕ್ರಿಸ್ತರ ಪುನಾರುತ್ಥಾನದ ಹಬ್ಬವನ್ನು ಆಚರಿಸಲಾಗುತ್ತದೆ.