ಉಡುಪಿಯಲ್ಲಿ 5 ಕೋ. ವೆಚ್ಚದ ಗ್ರಂಥಾಲಯ ಸ್ಥಾಪನೆ: ಶಾಸಕ ಪ್ರಮೋದ್
ಉಡುಪಿ, ಮಾ.20: ಸುಮಾರು 5 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯವನ್ನು ಉಡುಪಿ ನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಹಾಗೂ ಉಡುಪಿ ನಗರಸಭೆಯ ವತಿಯಿಂದ ಬೈಲೂರು ವಾರ್ಡ್‌ನ ಭಾಗ್ಯಮಂದಿರ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಬೈಲೂರಿನ ಶಾಖಾ ಗ್ರಂಥಾಲಯವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈಗಾಗಲೇ ಗ್ರಂಥಾಲಯದ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಉಡುಪಿ ಅಭಿವೃದ್ಧಿ ಪ್ರಾಧಿಕಾರದಿಂದ 1 ಕೋ.ರೂ. ಹಾಗೂ ಗ್ರಂಥಾಲಯ ಇಲಾಖೆಯಿಂದ 1 ಕೋ.ರೂ. ಒದಗಿಸಲಾಗುವುದು. ಉಳಿದ 3 ಕೋ.ರೂ. ಅನುದಾನವನ್ನು ಮಂಜೂರು ಮಾಡು ವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದವರು ಹೇಳಿದರು.
ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪಿ.ಯುವರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಡಿ.ಮಂಜುನಾಥಯ್ಯ, ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಸದಸ್ಯರಾದ ಎಂ.ಆರ್. ಪೈ, ರಮೇಶ್ ಕಾಂಚನ್, ಮಿನಾಕ್ಷಿ ಮಾಧವ ಬನ್ನಂಜೆ, ಹೇಮಾ ಹಿಲಾರಿ ಜತ್ತನ್ನ, ಜನಾರ್ದನ ಭಂಡಾರ್ಕರ್, ಶಾಂತರಾಮ್, ಉದ್ಯಮಿ ಅಮೃತ್ ಶೆಣೈ ಉಪಸ್ಥಿತರಿದ್ದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಿ. ಐ.ನಳಿನಿ ಸ್ವಾಗತಿಸಿದರು. ಗ್ರಂಥ ಪಾಲಕಿ ಎಂ.ಜಯಶ್ರೀ ವಂದಿಸಿದರು. ಎಂ.ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು.