×
Ad

ಖಾಸಗಿ ಸ್ಥಳದಲ್ಲಿ ಅಶ್ಲೀಲ ಕೃತ್ಯ ಅಪರಾಧವಲ್ಲ: ಬಾಂಬೆ ಹೈಕೋರ್ಟ್

Update: 2016-03-20 23:30 IST

ಮುಂಬೈ, ಮಾ.20: ಖಾಸಗಿ ಸ್ಥಳದಲ್ಲಿ ನಡೆಸಿದ ಅಶ್ಲೀಲ ಕೃತ್ಯಗಳು ಭಾರತೀಯ ದಂಡ ಸಂಹಿತೆಯ ಪ್ರಕಾರ ಕ್ರಿಮಿನಲ್ ಅಪರಾಧವಾಗುವುದಿಲ್ಲವೆಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.

ಫ್ಲಾಟೊಂದರಲ್ಲಿ ಮಹಿಳೆಯರೊಂದಿಗೆ ಅಶ್ಲೀಲ ಕೃತ್ಯ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ 13 ಮಂದಿಯ ಮೇಲೆ ಹೂಡಲಾಗಿದ್ದ ಮೊಕದ್ದಮೆಯೊಂದನ್ನು ಅದು ರದ್ದುಗೊಳಿಸಿದೆ.

ತಮ್ಮ ವಿರುದ್ಧ ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಂಧೇರಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆ.294ರನ್ವಯ (ಇತರರಿಗೆ ತೊಂದರೆಯಾಗುವಂತೆ, ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ ನಡೆಸುವುದು, ಅಶ್ಲೀಲ ಸಂಜ್ಞೆ ಮಾಡುವುದು ಅಥವಾ ಅಶ್ಲೀಲ ಹಾಡು, ಶಬ್ದಗಳನ್ನು ಹೇಳುವುದು) ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಈ 13 ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎನ್.ಎಚ್.ಪಾಟೀಲ್ ಹಾಗೂ ಎ.ಎಂ. ಬದರ್‌ರಿದ್ದ ವಿಭಾಗೀಯ ಪೀಠವೊಂದು ನಡೆಸಿತ್ತು.

ನೆರೆಯ ಫ್ಲಾಟ್‌ನಿಂದ ದೊಡ್ಡ ದನಿಯಲ್ಲಿ ಸಂಗೀತ ಕೇಳಿಸುತ್ತಿದೆ. ಅರೆಬರೆ ಬಟ್ಟೆ ತೊಟ್ಟಿರುವ ಮಹಿಳೆಯರು ನೃತ್ಯ ಮಾಡುತ್ತಿರುವುದು ಹಾಗೂ ಪುರುಷರು ಅವರ ಮೇಲೆ ಹಣ ಎಸೆಯುತ್ತಿರುವುದು ಕಿಟಕಿಯಿಂದ ಕಾಣಿಸುತ್ತಿದೆಯೆಂದು 2015ರ ಡಿ.12ರಂದು ಪತ್ರಕರ್ತರೊಬ್ಬರು ದೂರು ನೀಡಿದ್ದರು. ಅದರ ಅನುಸಾರ ಪೊಲೀಸರು ಫ್ಲಾಟ್‌ಗೆ ದಾಳಿ ನಡೆಸಿದಾಗ 6 ಮಂದಿ ಮಹಿಳೆಯರು ನರ್ತಿಸುತ್ತಿದ್ದರು. 13 ಮಂದಿ ಪುರುಷರು ಮದ್ಯ ಸೇವಿಸುತ್ತಿದ್ದರು. ಎಲ್ಲ 13 ಮಂದಿ ಪುರುಷರನ್ನು ವಶಕ್ಕೆ ಪಡೆದು ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತೆಂದು ಪೊಲೀಸರು ವಿವರಿಸಿದ್ದಾರೆ.
ಅರ್ಜಿದಾರರ ಪರ ವಕೀಲ ರಾಜೇಂದ್ರ ಶಿರೋಡ್ಕರ್, ಪ್ರಕರಣ ನಡೆದಿದೆಯೆನ್ನಲಾದ ಫ್ಲಾಟನ್ನು ಸಾರ್ವಜನಿಕ ಸ್ಥಳ ಎನ್ನುವಂತಿಲ್ಲ. ಅಲ್ಲಿ ಬೇರೆಯವರಿಗೆ ಪ್ರವೇಶವಿರಲಿಲ್ಲವೆಂದು ವಾದಿಸಿದ್ದರು.

ಅವರ ವಾದವನ್ನೊಪ್ಪಿದ ನ್ಯಾಯಪೀಠ, ಖಾಸಗಿ ಸ್ಥಳದಲ್ಲಿ ಅಶ್ಲೀಲ ಕೃತ್ಯ ಅಥವಾ ಅಶ್ಲೀಲ ದಶ್ಯಗಳ ವೀಕ್ಷಣೆ ನಡೆಸುವುದು ಐಪಿಸಿಯ ಸೆ.294ರ ಪ್ರಸ್ತಾಪದಡಿ ಬರುವುದಿಲ್ಲ. ಮಾಲಕನ ಖಾಸಗಿ ಉಪಯೋಗಕ್ಕಾಗಿರುವ, ಖಾಸಗಿ ಕಟ್ಟಡದ ಫ್ಲಾಟ್, ಸಾರ್ವಜನಿಕ ಸ್ಥಳ ಎನಿಸುವುದಿಲ್ಲ. ಕೇವಲ ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಅಂತಹ ಕೃತ್ಯಗಳಿಗಷ್ಟೇ ಸೆ.294 ಅನ್ವಯವಾಗುತ್ತದೆಂದು ತೀರ್ಪು ನೀಡಿದ ನ್ಯಾಯಪೀಠ ಮೊಕದ್ದಮೆಯನ್ನು ವಜಾಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News