×
Ad

ಜಾರ್ಖಂಡ್: ಜಾನುವಾರು ವ್ಯಾಪಾರಿಗಳಿಬ್ಬರ ಹತ್ಯೆ: ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ

Update: 2016-03-20 23:37 IST

ರಾಂಚಿ, ಮಾ.20: ಲಾತೇಹಾರ್‌ನಲ್ಲಿ ಇಬ್ಬರು ಮುಸ್ಲಿಂ ಜಾನುವಾರು ವ್ಯಾಪಾ ರಿಗಳನ್ನು ಥಳಿಸಿಕೊಂದು ಮರಕ್ಕೆ ನೇತು ಹಾಕಿದಂತಹ ಪ್ರಕರಣಗಳು ಮರು ಕಳಿಸದಂತೆ ಖಚಿತಪಡಿಸಲು ರಾಜ್ಯದ ಅಧಿಕಾರಿಗಳಿಗೆ ತಾನು ನಿರ್ದೇಶನ ನೀಡಿದ್ದೇನೆಂದು ಜಾರ್ಖಂಡ್‌ನ ಮುಖ್ಯಮಂತ್ರಿ ರಘುವರ ದಾಸ್ ರವಿವಾರ ಹೇಳಿದ್ದಾರೆ.

ಈ ಸಂಬಂಧ ಪೊಲೀಸರು ಕೆಲವು ಮಂದಿಯನ್ನು ಬಂಧಿಸಿದ್ದಾರೆ. ಯಾರೂ ರಾಜ್ಯದಿಂದ ಹೊರಗೆ ಜಾನುವಾರುಗಳನ್ನು ಒಯ್ಯಬಾರದೆಂಬ ಕಾಯ್ದೆಯೂ ಜಾರ್ಖಂಡ್‌ನಲ್ಲಿದೆ. ಪೊಲೀಸರು ಪರಿಸ್ಥಿತಿಯನ್ನು ಶಮನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ಖಚಿತಪಡಿಸಲು ತಾನು ಆಡಳಿತಕ್ಕೆ ನಿರ್ದೇಶನ ನೀಡಿದ್ದೇನೆಂದು ಅವರು ಎಎನ್‌ಐಗೆ ತಿಳಿಸಿದ್ದಾರೆ.

ಒಬ್ಬ ಹದಿ ಹರೆಯದವನೂ ಸೇರಿದಂತೆ ಇಬ್ಬರು ಜಾನುವಾರು ವ್ಯಾಪಾರಿಗಳ ಶವಗಳು ಶುಕ್ರವಾರ ಜಾರ್ಖಂಡ್‌ನ ಲಾತೇಹಾರ್ ಜಿಲ್ಲೆಯ ಝಬ್ಬರ್ ಗ್ರಾಮದಲ್ಲಿ ಮರವೊಂದಕ್ಕೆ ನೇತು ಹಾಕಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಪ್ರಕರಣದ ಸಂಬಂಧ ಐವರನ್ನು ಪೊಲೀಸರು ಶನಿವಾರ ಬಂಧಿಸಿದ್ದು, ಇತರ ಮೂವರು ತಲೆ ಮರೆಸಿಕೊಂಡಿದ್ದಾರೆ.

ಮೃತರಿಬ್ಬರ ಕೈಗಳನ್ನು ಕಟ್ಟಲಾಗಿತ್ತು. ಅವರ ಶರೀರಗಳ ಮೇಲೆ ಗಾಯದ ಗುರುತುಗಳಿದ್ದವು. ವ್ಯಾಪಾರಿಗಳಿಬ್ಬರನ್ನೂ ಥಳಿಸಿ ಕೊಂದ ಬಳಿಕ ನೇತು ಹಾಕಲಾಗಿತ್ತೆಂದು ಇದು ಸೂಚಿಸುತ್ತದೆಯೆಂದು ಮೂಲಗಳು ಹೇಳಿವೆ.

ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದೆಯೆಂಬ ವರದಿಗಳನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಸದ್ಯಕ್ಕೆ ಅಲ್ಲಿ ಜನರು ಗುಂಪು ಸೇರುವುದನ್ನು ಪೊಲೀಸರು ನಿಷೇಧಿಸಿದ್ದಾರೆ. ಮೂರು ತಿಂಗಳ ಹಿಂದೆ ಬಾಲುಮಠ್‌ನಲ್ಲಿ ಗೋವಧೆಯ ವಿಚಾರದಲ್ಲಿ ಹಿಂದೂ-ಮುಸ್ಲಿಮರ ನಡುವೆ ಘರ್ಷಣೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News