ಸಮಾನ ನಾಗರಿಕ ಹಕ್ಕಿಗಾಗಿ ಮಹಾಡ್ ಚಳವಳಿ: ಪ್ರೊ.ಫಣಿರಾಜ್

Update: 2016-03-20 18:07 GMT

ಉಡುಪಿ, ಮಾ.20: 16ನೆ ಶತಮಾನದಲ್ಲಿ ಮಹಾತ್ಮರು ಭಕ್ತಿಪಂಥದ ಮೂಲಕ ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸಾರಲು ಚಳವಳಿ ನಡೆಸಿದ್ದರು. ಅಂಬೇಡ್ಕರ್ ಲೋಕ ದೃಷ್ಟಿಯಿಂದ ಎಲ್ಲರೂ ಸಮಾನರು ಎಂಬುದನ್ನು ತೋರಿಸಲು ಮಹಾಡ್ ಚಳವಳಿಯ ಮೂಲಕ ನಾಗರಿಕ ಹಕ್ಕಿನ ಹೋರಾಟ ನಡೆಸಿದರು ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಮಹಾಡ್ ಕೆರೆಯ ನೀರನ್ನು ಸ್ಪರ್ಶಿಸುವುದರ ಮೂಲಕ ನಾಗರಿಕ ಹಕ್ಕನ್ನು ಪ್ರತಿಪಾದಿಸಿದ ಮಹಾನ್ ದಿನದ ನೆನಪಲ್ಲಿ ಉಡುಪಿ ಪ್ರಗತಿಪರ ನಾಗರಿಕ ಸಂಘಟನೆ ಗಳ ವತಿಯಿಂದ ಉಡುಪಿಯ ಟಿ.ಎ. ಪೈ ಹಿಂದಿ ಭವನದಲ್ಲಿ ರವಿವಾರ ಆಯೋಜಿಸಲಾದ ನಾಗ ರಿಕ ಹಕ್ಕುಗಳ ದಿನಾಚರಣೆಯಲ್ಲಿ ಅವರು ಮಾತ ನಾಡುತ್ತಿದ್ದರು.

ದೇವರ ದೃಷ್ಟಿಯಿಂದ ಎಲ್ಲರೂ ಸಮಾನರು ಎಂಬುದನ್ನು ತೋರಿಸಿಕೊಳ್ಳಲು ಹಾಗೂ ಅನ್ನ, ನೀರು, ಜಾತಿ ಸಮಾನತೆಗಾಗಿ ಭಕ್ತಿ ಚಳವಳಿ ನಡೆದಿತ್ತು. ಇದರಿಂದ ದಲಿತರಲ್ಲೂ ಭಕ್ತಿ ಇದೆ ಎಂಬುದನ್ನು ಸಮಾಜಕ್ಕೆ ತೋರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅಂಬೇಡ್ಕರ್ ಮಹಾಡ್‌ನಲ್ಲಿ ಕೆರೆಯ ನೀರನ್ನು ಸ್ಪರ್ಶಿಸುವ ಮೂಲಕ ದೇವರ ದೃಷ್ಟಿಯಿಂದಲ್ಲ, ಲೌಕಿಕವಾಗಿ ನಾವೆಲ್ಲ ಸಮಾನರು ಎಂಬುದನ್ನು ತೋರಿಸುವ ಹೋರಾಟವನ್ನು ಆರಂಭಿ ಸಿದರು ಎಂದರು.

ನಾಗರಿಕರ ಹಕ್ಕನ್ನು ಹೋರಾಟದಿಂದ ಪಡೆಯುವ ಹಾಗೂ ಮನುಸ್ಮತಿ ಸಂಹಿತೆಯಲ್ಲಿರುವ ಹಿಂಸಾತ್ಮಕ ಬ್ರಾಹ್ಮಣಶಾಹಿಯನ್ನು ನಾಶ ಮಾಡುವಂತಹ ಎರಡು ಮಹತ್ತರ ಚಳವಳಿಯನ್ನು ಅಂಬೇಡ್ಕರ್ ತನ್ನ ಜೀವನದ ಉದ್ದಕ್ಕೂ ನಡೆಸಿದರು ಎಂದವರು ತಿಳಿಸಿದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಮಾತನಾಡಿ, ದಲಿತರನ್ನು ಕನಿಷ್ಠ ಮನುಷ್ಯರನ್ನಾಗಿ ನೋಡುವಂತಹ ಸ್ಥಿತಿ ಆ ಕಾಲದಲ್ಲಿ ಇರಲಿಲ್ಲ. ಇಂದು ಕೂಡ ಅದೆಲ್ಲ ನೇರವಾಗಿ ಇಲ್ಲದಿದ್ದರೂ ಪರೋಕ್ಷವಾಗಿ ನಡೆಯುತ್ತಿವೆ. ದೇವಸ್ಥಾನಗಳು ಸಾರ್ವತ್ರಿಕ ಎಂದು ಹೇಳಿ ಕೊಂಡರೂ ಅದು ಆಸ್ಪತ್ರೆ, ಶಾಲೆಗಳಂತೆ ಸಾರ್ವಜನಿಕ ವಾಗಿ ಇರಲಿಲ್ಲ. ಅದಕ್ಕಾಗಿ ದೇವರ ನಂಬಿಕೆ ಇಲ್ಲದಿ ದ್ದರೂ ಅಂಬೇಡ್ಕರ್ ದಲಿತರು ದೇವಳ ಪ್ರವೇಶಿಸುವ ಹೋರಾಟವನ್ನು ಕೈಗೆತ್ತಿಕೊಂಡಿದ್ದರು ಎಂದರು.
ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ಅಂಬೇಡ್ಕರ್‌ರನ್ನು ಇಂದು ಕೇವಲ ಭಾಷಣದ ವಸ್ತುವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಅವರನ್ನು ಜೀವನದ ವಸ್ತುವನ್ನಾಗಿಸುವ ಕಾರ್ಯ ಆಗಬೇಕು. ಮಹಾಡ್ ದಿನವನ್ನು ಆಚರಿಸದೆ ಅಂಬೇಡ್ಕರ್ ದಿನವನ್ನು ಆಚರಿಸುವುದರಲ್ಲಿ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ವಹಿಸಿದ್ದರು. ದಸಂಸ ಮುಖಂಡರ ಶ್ಯಾಮ್‌ರಾಜ್ ಬಿರ್ತಿ, ಉದಯ ಕುಮಾರ್ ತಲ್ಲೂರು, ಶಂಭು ಮಾಸ್ತರ್ ಮಾತನಾಡಿದರು. ದಿನಕರ ಬೆಂಗ್ರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಭಾರತದಲ್ಲಿ ನಾಗರಿಕ ಹಕ್ಕುಗಳ ಪರಿಕಲ್ಪನೆ ಮೂಡಿಸಿ, ಅದರ ಜಾಗೃತಿಗೆ ಚಳವಳಿ ರೂಪಿಸಿದವರು ಅಂಬೇಡ್ಕರ್. ಸ್ವಾತಂತ್ರ ಸಂಗ್ರಾಮದಲ್ಲಿ ಗಾಂಧಿಯ ಉಪ್ಪಿನ ಸತ್ಯಾಗ್ರಹದಂತೆ ಅಂಬೇಡ್ಕರ್‌ರ ಅಸ್ಪಶ್ಯತೆಯ ವಿರುದ್ಧ ಹೋರಾಟದಲ್ಲಿ ಮಹಾಡ್ ಚಳವಳಿ ಕೂಡ ಅಷ್ಟೇ ಗಂಭೀರ ಸ್ವರೂಪದ್ದಾಗಿತ್ತು.

-ಪ್ರೊ.ಫಣಿರಾಜ್

ಬೇರೆ ಎಲ್ಲ ಕ್ಷೇತ್ರಗಳಲ್ಲಿ ಮೀಸಲಾತಿ ಕೇಳುವವರು ಭಾರತೀಯ ಸೈನ್ಯದಲ್ಲೂ ಕೇಳಲಿ ಎಂಬ ಕೀಳುಮಟ್ಟದ ಸಂದೇಶಗಳು ಇಂದು ರವಾನೆಯಾಗುತ್ತಿವೆ. ಈಗಿನ ಸೈನ್ಯದಲ್ಲಿ ಇರುವವರು ಹಿಂದುಳಿದ ವರ್ಗ, ದಲಿತರೇ ಹೊರತು ಆಡ್ವಾಣಿ, ಆರೆಸ್ಸೆಸ್ ಮುಖಂಡರ ಮಕ್ಕಳಲ್ಲ. ಸೈನ್ಯದಲ್ಲಿಯೂ ಮೀಸಲಾತಿ ನೀಡಿದರೆ ದಲಿತರು ಸಂತೋಷ ದಿಂದ ಒಪ್ಪಿಕೊಳ್ಳುತ್ತಾರೆ. ಇಂತಹ ಸಂದೇಶ ರವಾನಿಸುವವರಲ್ಲಿರುವ ದಲಿತರು ಹಾಗೂ ಮೀಸಲಾತಿ ಬಗೆಗಿನ ಮನಸ್ಥಿತಿ ಅರ್ಥೈಸಿಕೊಳ್ಳಬಹುದು.
                     -ಶ್ಯಾಮ್‌ರಾಜ್ ಬಿರ್ತಿ, ದಲಿತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News