ಮೂಡುಬಿದಿರೆ: ಬೀದಿ ಬದಿ ವ್ಯಾಪಾರಿಗಳಿಂದ ಪುರಸಭಾ ಕಾರ್ಯಾಲಯದ ಎದುರು ಪ್ರತಿಭಟನೆ
ಮೂಡುಬಿದಿರೆ: ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣೆ ಕಾಯಿದೆಯನ್ನು ಉಲ್ಲಂಘಿಸಿ ಮೂಡುಬಿದಿರೆ ಪುರಸಭಾ ಅಧಿಕಾರಿಗಳು ಬಡ ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ಮಾರಕವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಿಐಟಿಯು ವತಿಯಿಂದ ಪುರಸಭಾ ಕಾರ್ಯಾಲಯದ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಬೀದಿ ಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಕೆ. ಯಾದವ ಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ಗಾಂಜಾ ಮಾರುತ್ತಾರೆ, ಮದ್ಯಮಾರುತ್ತಾರೆ, ಸತ್ತ ಕೋಳಿಯನ್ನು ಕಬಾಬ್ ಮಾಡುತ್ತಾರೆ, ಹೋಟೆಲ್‌ಗಳಲ್ಲಿ ಉಪಯೋಗಿಸಿದ ಎಣ್ಣೆಯನ್ನು ಕಡಿಮೆ ದರದಲ್ಲಿ ಖರೀದಿಸಿ ಮಾರುತ್ತಾರೆ ಎಂಬಿತ್ಯಾದಿ ಸುಳ್ಳು ಸುದ್ದಿಗಳನ್ನು ಹರಡಿಸಿ, ಆಪಾದಿಸಿ, ತೆರವು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು. ಈ ಆರೋಪಗಳ ಬಗ್ಗೆ ಒಂದಾದರೂ ದಾಖಲೆ ಕೊಡಿ.ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣಾ ಕಾಯಿದೆ-2012ನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿದರೆ ಈ ಸಮಸ್ಯೆ ಬರುತ್ತಿರಲಿಲ್ಲ.ಮೂಡುಬಿದಿರೆಯ ಗೂಡಂಗಡಿಗಳನ್ನು ತೆರವುಗೊಳಿಸಿರುವುದು ಬೀದಿ ಬದಿ ವ್ಯಾಪಾರಸ್ಥರ ಸ್ವರಕ್ಷಣಾ ಕಾಯ್ದೆ 2012ರ ಸ್ಪಷ್ಟ ಉಲ್ಲಂಘೆಯಾಗಿದೆ. ಸ್ಟ್ರೀಟ್ ವಿಂಡ್ ಸಮಿತಿ ರಚಿಸಿದ್ದರು ಅದರಲ್ಲಿ ಬೀದಿ ಬದಿ ವ್ಯಾಪರಸ್ಥರನ್ನು ಸೆರಿಸಿಲ್ಲ. ಬೀದಿ ಬದಿ ವ್ಯಾಪಾರಿಗಳ ಗೂಡಂಗಡಿಗಳನ್ನು ತೆರವು ಗೊಳಿಸಿದ ಹಾಗೆ ಮೂಡುಬಿದರೆಯಲ್ಲಿ ಅಕ್ರಮವಾಗಿ ನಿರ್ಮಿಸಿದ ಪ್ರಭಾವಿಗಳ ಕಟ್ಟಡಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪುರಸಭಾ ಸದಸ್ಯೆ, ಸಿಪಿಐಎಂ ನಾಯಕಿ ರಮಣಿ ಮಾತನಾಡಿ, ಎಲ್ಲರಿಗೂ ಒಂದೇ ಕಾನೂನು ಇರಲಿ’ ಎಂದು ಆಗ್ರಹಿಸಿದರು. ಬೀದಿ ಬದಿ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ಮುಂದುವರಿದರೆ ತಾವು ತಮ್ಮ ಪುರಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲೂ ಸಿದ್ಧ ಎಂದು ಘೋಷಿಸಿದರು.
ಕೊನೆಗೆ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಮಾತುಕತೆ ನಡೆಯಿತು. ಒಂದು ವಾರದೊಳಗಾಗಿ ಸೂಕ್ತ ವ್ಯವಸ್ಥೆ ಮಾಡುವುದಾಗಿಯೂ ಸ್ವಾಧೀನಪಡಿಸಲಾದ ಸೊತ್ತಗಳನ್ನು ಮಂಗಳವಾರ ವಾಪಾಸು ಕೊಡುವುದಾಗಿಯೂ ಅಧಿಕಾರಿಗಳು ಭರವಸೆ ನೀಡಿದರು. ನ್ಯಾಯ ಸಿಗದಿದ್ದರೆ ಮುಂದಿನ ವಾರ ಹೋರಾಟವನ್ನು ತೀವ್ರಗತಿಯಲ್ಲಿ ಮುಂದುವರಿಸಲಾಗುವುದು ಎಂದರು.
ರೈತ ಸಂಘದ ಜಿಲ್ಲಾ ಮುಖಂಡ ಸುಂದರ ಶೆಟ್ಟಿ, ಮೂಡುಬಿದಿರೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸೀತಾರಾಮ ಶೆಟ್ಟಿ, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಲಕ್ಷ್ಮೀ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಶೋಕ್, ಅನಿಲ್ ಉಪಸ್ಥಿತರಿದ್ದರು.