ಕಿವೀಸ್‌ಗೆ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿಫೈನಲ್ ಕನಸು
ಮೊಹಾಲಿ, ಮಾ.21: ನ್ಯೂಝಿಲೆಂಡ್ ತಂಡ ಟ್ವೆಂಟಿ-20 ವಿಶ್ವಕಪ್‌ನ ಸೂಪರ್-10 ಹಂತದ ಹಣಾಹಣಿಯಲ್ಲಿ ಎರಡು ಗೆಲುವಿನೊಂದಿಗೆ ಗ್ರೂಪ್ 2ರಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದು ಪಂದ್ಯದಲ್ಲಿ ಅದು ಜಯಿಸಿದರೆ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಲಿದೆ. ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಅದು ಪಾಕಿಸ್ತಾನವನ್ನು ಎದುರಿಸಲಿದೆ.
ಪಾಕಿಸ್ತಾನ ತಂಡ ಆಡಿರುವ ಎರಡು ಪಂದ್ಯಗಳ ಪೈಕಿ ಬಾಂಗ್ಲಾ ವಿರುದ್ಧ ಜಯ ಗಳಿಸಿತ್ತು. ಆದರೆ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಸೋಲು ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದೆ. ಸೆಮಿಫೈನಲ್‌ಗೇರುವ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಇನ್ನುಳಿದ ಎರಡು ಪಂದ್ಯಗಳನ್ನು ಅದು ಗೆಲ್ಲಬೇಕಾಗಿದೆ.
ತಂಡದ ಸಾಮರ್ಥ್ಯ: ನ್ಯೂಝಿಲೆಂಡ್‌ನ ಆಟಗಾರರು ಮೂರು ಗಂಟೆಗಳ ಕಠಿಣ ಅಭ್ಯಾಸ ನಡೆಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯ ತಂಡದ ವಿರುದ್ಧ ಗೆಲುವಿನ ಹಿನ್ನೆಲೆಯಲ್ಲಿ ನ್ಯೂಝಿಲೆಂಡ್ ತಂಡ ಪಾಕ್‌ನ ವಿರುದ್ಧ ಅದೇ ಪ್ರದರ್ಶನ ಮುಂದುವರಿಸಲು ಯೋಚಿಸುತ್ತಿದೆ. ನಥನ್ ಮೆಕಲಮ್ ಬದಲಿಗೆ ಮೆಕ್ಲೀನಘನ್‌ಗೆ ಅವಕಾಶ ನೀಡಿರುವುದು ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಫಲ ನೀಡಿದೆ. ಮೊಹಾಲಿ ಪಿಚ್ ವೇಗಿಗಳ ಸ್ನೇಹಿ. ಈ ಕಾರಣದಿಂದಾಗಿ ಕಿವೀಸ್ ಮೂವರು ವೇಗಿಗಳನ್ನು ಹಾಗೂ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲು ಯೋಚಿಸುತ್ತಿದೆ.
ಪಾಕಿಸ್ತಾನ ತಂಡ ಕಳೆದ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಒತ್ತಡಕ್ಕೆ ಸಿಲುಕಿದೆ. ನಾಯಕ ಶಾಹಿದ್ ಅಫ್ರಿದಿ ತಂಡವನ್ನು ಚೆನ್ನಾಗಿ ಮುನ್ನಡೆಸುವಲ್ಲಿ ಎಡವಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ಇಮಾದ್ ವಸೀಮ್ ಬದಲಿಗೆ ವೇಗಿ ಮುಹಮ್ಮದ್ ಶಮಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಸಮಸ್ಯೆ ಎದುರಿಸಿತ್ತು.ಮುಂದಿನ ಪಂದ್ಯದಲ್ಲೂ ಅವರು ತಂಡದಲ್ಲಿ ನಂ.9 ಸ್ಥಾನಕ್ಕೆ ವಹಾಬ್ ರಿಯಾಝ್ ಜೊತೆ ಸ್ಪರ್ಧೆ ಎದುರಿಸುವಂತಾಗಿದೆ.
ಸಂಭಾವ್ಯ ತಂಡ
ನ್ಯೂಝಿಲೆಂಡ್ : ಕೇನ್ ವಿಲಿಯಮ್ಸನ್(ನಾಯಕ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ, ಕೋರಿ ಆ್ಯಂಡರ್ಸನ್, ರಾಸ್ ಟೇಲರ್, ಗ್ರಾಂಟ್ ಎಲಿಯಟ್, ಲೂಕ್ ರೊಂಚಿ(ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನೆರ್, ಆ್ಯಡಮ್ ಮಿಲ್ನೆ, ಮಿಚೆಲ್ ಮೆಕ್ಲೀನಘನ್, ಐಶ್ ಸೊಧಿ.
ಪಾಕಿಸ್ತಾನ: ಶಾಹಿದ್ ಅಫ್ರಿದಿ(ನಾಯಕ), ಅಹ್ಮದ್ ಶಹ್‌ಝಾದ್, ಶಾರ್ಜಿಲ್ ಖಾನ್, ಶುಐಬ್ ಮಲಿಕ್, ಮುಹಮ್ಮದ್ ಹಫೀಝ್, ಉಮರ್ ಅಕ್ಮಲ್, ಸರ್ಫರಾಝ್ ಅಹ್ಮದ್, ಮುಹಮ್ಮದ್ ಶಮಿ, ವಹಾಬ್ ರಿಯಾಝ್/ಇಮಾದ್ ವಸೀಮ್, ಮುಹಮ್ಮದ್ ಆಮಿರ್, ಮುಹಮ್ಮದ್ ಇರ್ಫಾನ್.
2016ರಲ್ಲಿ ಟ್ವೆಂಟಿ -20 ಪಂದ್ಯಗಳಲ್ಲಿ ಯಶಸ್ಸು
*ನ್ಯೂಝಿಲೆಂಡ್ ಆಡಿರುವ 7 ಪಂದ್ಯಗಳ ಪೈಕಿ 6ರಲ್ಲಿ ಜಯಿಸಿದೆ. 1ರಲ್ಲಿ ಸೋತಿದೆ.
*ಪಾಕಿಸ್ತಾನ ತಂಡ ಆಡಿರುವ 9 ಪಂದ್ಯಗಳಲ್ಲಿ 4ರಲ್ಲಿ ಜಯಿಸಿದೆ.5ರಲ್ಲಿ ಸೋತಿದೆ.
ಹೈಲೈಟ್ಸ್
*ನ್ಯೂಝಿಲೆಂಡ್ ಸತತ ಎರಡು ಪಂದ್ಯಗಳಲ್ಲಿ ಜಯಿಸಿದೆ.
*ಕಿವೀಸ್ ಉತ್ತಮ ರನ್‌ರೇಟ್ ಹೊಂದಿದೆ.
*ಮುನ್ರೊ ತಂಡದ ಉದಯೋನ್ಮುಖ ಆಟಗಾರ. ಅವರ ಸ್ಟ್ರೈಕ್ ರೇಟ್ 151.47.
* ಟ್ವೆಂಟಿ-20 ಪಂದ್ಯದಲ್ಲಿ ವೇಗದ ಅರ್ಧಶತಕ ದಾಖಲಿಸಿದ್ದಾರೆ.
* ನ್ಯೂಝಿಲೆಂಡ್ ಆಡಿರುವ 14 ಟ್ವೆಂಟಿ-20 ಪಂದ್ಯಗಳಲ್ಲಿ ಪಾಕ್ ವಿರುದ್ಧ 8ರಲ್ಲಿ ಜಯ ಗಳಿಸಿದೆ. ಪಾಕಿಸ್ತಾನ 6ರಲ್ಲಿ ಜಯ ಗಳಿಸಿದೆ
. ,,,,,,,,,
ಇಂದಿನ ಪಂದ್ಯ
ದಕ್ಷಿಣ ಆಫ್ರಿಕ-ಪಾಕಿಸ್ತಾನ
ಸ್ಥಳ: ಮೊಹಾಲಿ, ಸಮಯ: ರಾತ್ರಿ 7:30ಕ್ಕೆ ಆರಂಭ.