×
Ad

ಚುಟುಕು ಸುದ್ದಿಗಳು

Update: 2016-03-21 23:10 IST

ಪರೀಕ್ಷಾ ಪೂರ್ವ ತರಬೇತಿ ಶಿಬಿರ
ಕಾರ್ಕಳ, ಮಾ.21: ಜಮೀಯತುಲ್ ಫಲಾಹ್ ಕಾರ್ಕಳ ಘಟಕದ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ ಶಿಬಿರವು ತೆಳ್ಳಾರು ಮಂಜುನಾಥ ಪೈ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕ ಉಮೇಶ್ ಗೌತಮ್ ನಾಯ್ಕಾ ತರಬೇತಿ ನೀಡಿದರು.ಘಟಕದ ಅಧ್ಯಕ್ಷ ಅಶ್ಫಾಕ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮುಹಮ್ಮದ್ ಯಾಕೂಬ್, ಜತೆ ಕಾರ್ಯದರ್ಶಿ ಸೈಯದ್ ಹಸನ್, ಕೋಶಾಧಿಕಾರಿ ಸೈಯದ್ ಅಬ್ಬಾಸ್, ಸೈಯದ್ ಅಶ್ಫಾಕ್ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಸವಿತಾ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬೇಸಿಗೆ ತರಬೇತಿ ಶಿಬಿರ
ಉಡುಪಿ, ಮಾ.21: ಉಡುಪಿ ಜಿಪಂ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ಆಶ್ರಯದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಟೇಬಲ್ ಟೆನಿಸ್ ಹಾಗೂ ಶಟಲ್ ಬ್ಯಾಡ್‌ಮಿಂಟನ್ ತರಬೇತಿ ಶಿಬಿರವನ್ನು ಮಾ.28ರಿಂದ ಎ.17ರವರೆಗೆ 21 ದಿನಗಳ ಕಾಲ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಶಟ್ಲ್ ಬ್ಯಾಡ್ಮಿಂಟನ್ ತರಬೇತಿಗಾಗಿ 1200 ರೂ. ಹಾಗೂ ಇತರ ಕ್ರೀಡಾ ತರಬೇತಿಗಾಗಿ 500 ರೂ. ಪಾವತಿಸಿ ಅರ್ಜಿ ನಮೂನೆ ಯನ್ನು ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಇಲಾಖೆ, ಜಿಲ್ಲಾ ಕ್ರೀಡಾಂಗಣ ಉಡುಪಿ ಇಲ್ಲಿಂದ ಪಡೆದುಕೊಳ್ಳಬಹುದು.
ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ ದೂ.ಸಂ.0820-2521324, 9480886467ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಇಂದು ಉಪನ್ಯಾಸ
ಮಂಗಳೂರು, ಮಾ.21: ನಗರದ ರೇಡಿಯೋ ಕೇಳುಗರ ಸಂಘದ ವತಿಯಿಂದ ‘ಬಾನುಲಿಯ ಮೂರುವರೆ ದಶಕಗಳ ನನ್ನ ಪಯಣ’ ಕುರಿತ ಉಪನ್ಯಾಸ ಮಾ.22 ರಂದು ಪೂರ್ವಾಹ್ನ 6 ಗಂಟೆಗೆ ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ರೇಡಿಯೋ ಕೇಳುಗರ ಸಂಘದ ಕಾರ್ಯದರ್ಶಿ ಸಾವಿತ್ರಿ ರಾವ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಶಕುಂತಲಾ ಆರ್.ಕಿಣಿ ಉಪನ್ಯಾಸ ನೀಡುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್.ಡಿ. ಶರಣಪ್ಪ ಉದ್ಘಾಟಿಸುವರು. ಉಳ್ಳಾಲ ರಾಘವೇಂದ್ರ ಕಿಣಿ ಉಪಸ್ಥಿತರಿರುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಯು. ರಾಮರಾವ್, ಉಪಾಧ್ಯಕ್ಷ ಕೆ.ವಿ. ಸೀತಾರಾಮ್, ಜೊತೆ ಕಾರ್ಯದರ್ಶಿ ಬಿ. ಪ್ರಕಾಶ್‌ರಾವ್ ಉಪಸ್ಥಿತರಿದ್ದರು


ನಾಳೆಯಿಂದ ಬ್ರಹ್ಮಕಲಶಾಭಿಷೇಕ
ಕೊಣಾಜೆ, ಮಾ.21: ಬಂಟ್ವಾಳ ತಾಲೂಕು ದೇವಸ್ಯ ಇರಾ ಆಚೆಬೈಲು ಅರಸು ಕುರಿಯಾಡಿತ್ತಾಯ ಚಾವಡಿಯಲ್ಲಿ ಶ್ರೀ ಅರಸು ಕುರಿಯಾಡಿತ್ತಾಯ ದೈವದ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕವು ಬಡಾಜೆ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳವರ ನೇತೃತ್ವದಲ್ಲಿ ಮಾ.23 ಹಾಗೂ 24ರಂದು ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಇರಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ

ವಿಶ್ವ ಗ್ಲಾಕೋಮ ಸಪ್ತಾಹ
ಉಡುಪಿ, ಮಾ.21: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣ ವಿಭಾಗ, ಕೆಎಂಸಿ ಮಣಿಪಾಲ, ಗ್ರಾಪಂ ವಾರಂಬಳ್ಳಿ, ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ ಹಾಗೂ ವಿಶ್ವ ಮಧುಮೇಹ ಫೌಂಡೇಶನ್‌ನ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಗ್ಲಾಕೋಮ’ ಸಪ್ತಾಹ ದಿನಾಚರಣೆ ಹಾಗೂ ನೇತ್ರ ತಪಾಸಣಾ ಶಿಬಿರ ಇತ್ತೀಚೆಗೆ ಬ್ರಹ್ಮಾವರದ ಸರಕಾರಿ ಆರೋಗ್ಯ ಕೇಂದ್ರದಲ್ಲಿ ನಡೆಯಿತು.ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ನಿತ್ಯಾನಂದ ನಾಯಕ್, ಗ್ಲಾಕೋಮವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ನೀಡಿದರು. ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನಿತ್ಯಾನಂದ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಹೇಶ್ ಐತಾಳ್ ಸ್ವಾಗತಿಸಿ, ಮಕ್ಕಳ ತಜ್ಞ ಡಾ.ಮಹಾಬಲ ವಂದಿಸಿದರು.

ಕರಾಟೆ ಸ್ಪರ್ಧೆಯಲ್ಲಿ ಸಾಧನೆ
ಕೊಣಾಜೆ, ಮಾ.21: ವಿಶಾಖಪಟ್ಟಣದಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಕಣಚೂರು ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಗ್ರೀಷ್ಮಾ ಆರ್. ಮಲ್ಲಿ 1 ಚಿನ್ನ, 1 ಬೆಳ್ಳಿ ಮತ್ತು ಭೂಮಿಕಾ ಪಿ.ಗಟ್ಟಿ 2 ಬೆಳ್ಳಿ ಹಾಗೂ ಮಿಥಾಲಿ ಗಣೇಶ್ 1 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಮಾ.24: ಸುನ್ನಿ ಸಮಾವೇಶ
ಮಾಣಿ, ಮಾ.21: ಇಲ್ಲಿನ ನೇರಳಕಟ್ಟೆ ಸಮೀಪದ ಪರ್ಲೋಟ್ಟು ಎಂಬಲ್ಲಿ ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ಜಂಟಿ ಆಶ್ರಯದಲ್ಲಿ ಮಾ.24ರಂದು ಸಂಜೆ 6 ಗಂಟೆಗೆ ಮರ್‌ಹೂಂ ಮಿತ್ತೂರು ಉಸ್ಮಾನ್ ಹಾಜಿ ವೇದಿಕೆಯಲ್ಲಿ ಸುನ್ನಿ ಸಮಾವೇಶ ನಡೆಯಲಿದೆ. ಅಸೈಯದ್ ಇಬ್ರಾಹೀಂ ಹಂಝ ಹಾದಿ ತಂಙಳ್ ಪಾಟ್ರಕೋಡಿ ಅಧ್ಯಕ್ಷತೆಯಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನೌಫಲ್ ಸಖಾಫಿ ಕಳಸ ಮುಖ್ಯಭಾಷಣಗೈಯ್ಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಮಾ.25: ಗುರುಪುರ ದೇವಳದ ಬ್ರಹ್ಮಕಲಶ
ಮಂಗಳೂರು, ಮಾ.21: ಗುರುಪುರ ಮೂಳೂರು ಗ್ರಾಮದ ಕೊಳದಬದಿಯ ಶ್ರೀ ಸಿದ್ಧಿ ವಿನಾಯಕ ಅನ್ನಪೂರ್ಣೇಶ್ವರಿ ದೇವಸ್ಥಾನದ ನೂತನ ಶಿಲಾಮಯ ಗರ್ಭಗೃಹದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಾ. 25ರಂದು ಜರಗಲಿದೆ. ಮಾ.21ರಿಂದ ವೇದಮೂರ್ತಿ ಪೊಳಲಿ ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
‘ಪ್ಲಾಸ್ಟಿಕ್ ಕಸದ ಬುಟ್ಟಿ ಯೋಜನೆ ವ್ಯರ್ಥ’ ಮಂಗಳೂರು, ಮಾ.21: ರಾಜ್ಯ ಸರಕಾರದ ಎಸ್‌ಎಫ್‌ಸಿ ಅನುದಾನದಿಂದ ಪಾಲಿಕೆ ವ್ಯಾಪ್ತಿಯ ಮನೆಗಳಿಗೆ ಪ್ಲಾಸ್ಟಿಕ್ ಕಸದ ಬುಟ್ಟಿಗಳನ್ನು ವಿತರಿಸುವ ಯೋಜನೆ ಸಾರ್ವಜನಿಕ ಹಣವನ್ನು ಪೋಲು ಮಾಡುವ ಯೋಜನೆಯಾಗಿದೆ. ಅಧಿಕಾರ ಸ್ವೀಕರಿಸುತ್ತಲೇ ಪ್ಲಾಸ್ಟಿಕ್ ನಿಷೇಧದ ಮಂತ್ರ ಪಠಿಸಿದ ಮೇಯರ್ ತಮ್ಮ ಪ್ರಥಮ ಕೊಡುಗೆಯಾಗಿ ಜನತೆಗೆ ಪ್ಲಾಸ್ಟಿಕ್ ಬುಟ್ಟಿಗಳನ್ನು ವಿತರಿಸಲು ಯೋಜನೆ ಹಾಕಿರುವುದು ಅವರ ಹೇಳಿಕೆಗೆ ವ್ಯತಿರಿಕ್ತವಾಗಿದೆ. 1.90 ಕೋ.ರೂ.ಗಳ ಎಸ್‌ಎಫ್‌ಸಿ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸುವುದನ್ನು ಬಿಟ್ಟು ಸಾರ್ವಜನಿಕರಿಗೆ ಕಸದ ಬುಟ್ಟಿ ಯೋಜನೆ ವ್ಯರ್ಥ ಎಂದು ಮನಪಾ ಪ್ರತಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಅಭಿಪ್ರಾಯಪಟ್ಟಿದ್ದಾರೆ

ನವೀನ್‌ಚಂದ್ರ ಪುನರಾಯ್ಕೆ
ಮಂಗಳೂರು, ಮಾ.21: ಅಖಿಲ ಭಾರತ ಬಿಲ್ಲವರ ಯೂನಿಯನ್ ಕುದ್ರೋಳಿ ಇದರ ಅಧ್ಯಕ್ಷರಾಗಿ ಕುದ್ರೋಳಿ ನಾರಾಯಣಗುರು ವಿದ್ಯಾಸಂಸ್ಥೆಗಳ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ ಪುನರಾಯ್ಕೆಯಾಗಿದ್ದಾರೆ.  ಉಪಾಧ್ಯಕ್ಷರಾಗಿ ಕೆ.ಎ.ಜಯಚಂದ್ರ ಮತ್ತು ಕೆ.ಲೋಕ ನಾಥ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಕಾಶೀನಾಥ್, ಜೊತೆ ಕಾರ್ಯದರ್ಶಿಯಾಗಿ ನೀಲಯ್ಯ ಅಗರಿ ಮತ್ತು ಸುಖಲಾಕ್ಷಿ ವೈ ಸುವರ್ಣ, ಕೋಶಾಧಿಕಾರಿಯಾಗಿ ಬಿ.ದೇರಣ್ಣ, ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ಟಿ. ಸುವರ್ಣ ಮಂಗಳೂರು, ವೈ.ಸುಧೀರ್ ಕುಮಾರ್ ಉಡುಪಿ, ಉದಯಚಂದ್ರ ಡಿ.ಸುವರ್ಣ ಬೆಂಗಳೂರು, ಎನ್.ಪಿ. ಸುವರ್ಣ ಮುಂಬೈ, ಸುಚಿತ್‌ಕುಮಾರ್ ದುಬೈ ಚುನಾಯಿತರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಬೈಂದೂರು: ಸೆಬಿ ಕಾರ್ಯಾಗಾರ
ಉಡುಪಿ, ಮಾ.21: ಮೋಸ ಹೋಗುವವರು ಇರುವವರೆಗೂ ಮಾಡುವವರು ಇರುತ್ತಾರೆ. ಹೀಗಾಗಿ ಜಾಗರೂಕರಾಗಿರಬೇಕು. ಯುವ ಜನಾಂಗ ಕೇವಲ ದುಡಿದು, ಹಣ ಗಳಿಸಿದರೆ ಸಾಲದು. ಅದನ್ನು ಸದ್ವಿನಿಯೋಗ ಮಾಡಬೇಕು ಎಂದು ಆರ್ಥಿಕ ತಜ್ಞ, ನಿಟ್ಟೆಯ ಆಡಳಿತ ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಪ್ರೊ.ರಾಧಾಕೃಷ್ಣ ಶರ್ಮ ಹೇಳಿದರು.ಬೈಂದೂರು ಸರ ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಸೆಬಿ ಕಾರ್ಯಾಗಾರ’ದಲ್ಲಿ ಸಂಪ ನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಜೀವನದ ಕೊನೆಯ ಭಾಗದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗದಂತೆ ದುಡಿಯುವ ಹಂತದಲ್ಲಿಯೇ ಸರಿಯಾದ ಯೋಜನೆಯನ್ನು ರೂಪಿಸಿಕೊಂಡು ಮುನ್ನಡೆಯಬೇಕು. ಹಣದ ಹೂಡಿಕೆ ಮಾಡುವಾಗ ಎಲ್ಲೆಲ್ಲಿ, ಎಷ್ಟೆಷ್ಟು ಪ್ರಮಾಣದ ಬಂಡವಾಳವನ್ನು ತೊಡಗಿಸಬೇಕೆಂಬ ಸ್ಪಷ್ಟ ನಿರ್ಧಾರವಿರಬೇಕು. ಮಾರುಕಟ್ಟೆಯ ಲಾಭ-ನಷ್ಟಗಳ ಬಗ್ಗೆ ಸಂಪೂರ್ಣ ಚಿತ್ರಣವಿದ್ದರೆ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅವರು ನುಡಿದರು. ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಉಮೇಶ್ ಮಯ್ಯ ಕಾರ್ಯಾಗಾರ ಸಂಯೋಜಿಸಿದರು.

ಸ್ವಚ್ಛ ಭಾರತ ಅಭಿಯಾನ
ಬೆಳ್ತಂಗಡಿ, ಮಾ.21: ಉಜಿರೆ ಶ್ರೀ ಧ.ಮಂ. ಕಾಲೇಜಿನ ಎನ್‌ಸಿಸಿ ನೌಕಾ ವಿಭಾಗದ ವತಿಯಿಂದ ಕುದುರೆಮುಖ ಅರಣ್ಯ ವಿಭಾಗ ವ್ಯಾಪ್ತಿಯ ಬಂಡಾಜೆ ಪರಿಸರದಲ್ಲಿ ಬೆಳ್ತಂಗಡಿ ತಾಲೂಕಿನ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗದ ಸಹಯೋಗದೊಂದಿಗೆ ಸ್ವಚ್ಛ ಭಾರತ ಅಭಿಯಾನ ನಡೆಯಿತು. ಸುಮಾರು 12 ಕಿ.ಮೀ. ಹಾದಿಯಲ್ಲಿದ್ದ ಪ್ಲಾಸ್ಟಿಕ್, ಬಾಟಲ್‌ಗಳು, ಪೇಪರ್‌ಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಎನ್‌ಸಿಸಿ ನೌಕಾ ವಿಭಾಗದ ಅಧಿಕಾರಿ ಡಾ. ಶ್ರೀಧರ ಭಟ್, ಪ್ರಾಧ್ಯಾಪಕ ಅಚ್ಯುತ್ ಹಾಗೂ ಎನ್‌ಸಿಸಿಯ 40 ಕೆಡೆಟ್‌ಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News