ಕಾರ್ಯದಕ್ಷತೆ ಹೆಚ್ಚಿಸಲು ತರಬೇತಿ: ಶೇಖರ ಗೌಡ ಮಾಲಿ ಪಾಟೀಲ್
ಉಡುಪಿ, ಮಾ.21: ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಕಾರ್ಯದಕ್ಷತೆಯನ್ನು ಹೆಚ್ಚಿಸುವ, ಆಡಳಿತದಲ್ಲಿ ಚುರುಕು ಮುಟ್ಟಿಸುವ ಉದ್ದೇಶದಿಂದ ರಾಜ್ಯ ಸಹಕಾರ ಮಹಾಮಂಡಳ ಇಂತಹ ತರ ಬೇತಿ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಶೇಖರ ಗೌಡ ವಿರೂಪಾಕ್ಷ ಗೌಡ ಮಾಲಿ ಪಾಟೀಲ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಕೃಷಿಪತ್ತಿನ/ಪತ್ತಿನ ಸಹಕಾರ ಸಂಘಗಳ ಹಾಗೂ ಇತರೆ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹೊಟೇಲ್ ಡಯಾನ ಸಭಾಂಗಣದಲ್ಲಿ ಆಯೋ ಜಿಸಲಾದ ಆಡಳಿತ ನಿರ್ವಹಣೆ ಮತ್ತು ಆರ್ಥಿಕ ವ್ಯವಹಾರದ ಕಾರ್ಯದಕ್ಷತೆ ಕುರಿತ ರಾಜ್ಯ ಮಟ್ಟದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಎಸ್.ಎಲ್. ಬೋಜೇಗೌಡ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳು ಭಾರೀ ಠೇವಣಿಯನ್ನು ಹೊಂದಿದ್ದರೂ, ದೇಶದ ಬೆನ್ನೆಲುಬಾದ ಕೃಷಿಕ್ಷೇತ್ರಕ್ಕೆ ನೀಡುವ ಸಾಲ ಶೇ.2ರಷ್ಟು ಮಾತ್ರ. ಅದೇ ಸಹಕಾರ ಸಂಘಗಳು ತಮ್ಮ ಒಟ್ಟು ವ್ಯವಹಾರದ ಶೇ.35ರಷ್ಟನ್ನು ಕೃಷಿಕ್ಷೇತ್ರಕ್ಕೆ ನೀಡುತ್ತಿವೆ ಎಂದರು.
ಸಹಕಾರಿ ಕಾಯಿದೆಗಳು 25 ಬಾರಿ ಹಾಗೂ ನಿಯಮಗಳು 97 ಬಾರಿ ತಿದ್ದುಪಡಿಯಾಗಿವೆ. ಇಷ್ಟಾದರೂ ಕೃಷಿ ಕ್ಷೇತ್ರಕ್ಕೆ ನಾವು ನೀಡುವ ಸಾಲ ಶೇ.35 ಮಾತ್ರ. ಇದನ್ನು ಶೇ.75ಕ್ಕೆ , ಶೇ.90ಕ್ಕೆ ಮುಟ್ಟಿಸಬೇಕು. ದೊಡ್ಡ ಮಟ್ಟದ ಠೇವಣಿ ಇದ್ದರೆ ಮಾತ್ರ ಅದೊಂದು ಉತ್ತಮ ಬ್ಯಾಂಕ್ ಎಂದು ಕರೆಸಿಕೊಳ್ಳುವುದಿಲ್ಲ. ಜನಸಾಮಾನ್ಯರಿಗೆ, ರೈತರಿಗೆ ಅದರಿಂದ ಏನು ಪ್ರಯೋಜನವಿದೆ ಎಂಬುದರ ಮೇಲೆ ಅದರ ಸಾಧನೆಯನ್ನು ಪರಿಗಣಿಸಬೇಕು ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಾಜೇಶ್ ರಾವ್ ಪಾಂಗಾಳ, ಉಡುಪಿ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಕೆ.ಸುರೇಶ್ ರಾವ್, ಸಂಪನ್ಮೂಲ ವ್ಯಕ್ತಿಗಳಾದ ಎ.ಸಿ.ದಿವಾಕರ್, ಎಂ. ಚಂದ್ರಶೇಖರ್ ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರಿ ಯೂನಿಯನ್ ಆಡಳಿತ ಮಂಡಳಿ ಸದಸ್ಯ ಗೋಪಿಕೃಷ್ಣ ರಾವ್ ಸ್ವಾಗತಿಸಿದರು. ಸಿಇಒ ಎಚ್. ಬಿ.ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.