ಅಕ್ರಮ ಮರಳುಗಾರಿಕೆ: ಇಬ್ಬರ ಸೆರೆ
Update: 2016-03-21 23:32 IST
ಉಳ್ಳಾಲ, ಮಾ.21: ಜೆಸಿಬಿ ಮೂಲಕ ಮರಳುಗಾರಿಕೆ ನಡೆಸುತ್ತಿದ್ದ ಪ್ರದೇಶಕ್ಕೆ ದಾಳಿ ನಡೆಸಿದ ಭೂ ಮತ್ತು ಗಣಿ ಇಲಾಖೆ ಹಾಗೂ ಉಳ್ಳಾಲ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ಎರಡು ಜೆಸಿಬಿ ಯಂತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೆಸಿಬಿ ಆಪರೇಟರ್‌ಗಳಾದ ಜಾರ್ಖಂಡ್ ನಿವಾಸಿಗಳಾದ ನಯೀಂ(22) ಮತ್ತು ಖಲೀಲ್ (24) ಬಂಧಿತರು. ಮರಳುಗಾರಿಕೆ ನಡೆಸಲು ಉಪಯೋಗಿಸುತ್ತಿದ್ದ ಎರಡು ಜೆಸಿಬಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಳಿವೆಬಾಗಿಲು ಸಮೀಪ ಸಂಗ್ರಹಿಸಿದ ಮರಳನ್ನು ದೋಣಿ ಮೂಲಕ ತಂದು ಕೋಟೆಪುರ ಸಮೀಪ ಸಂಗ್ರಹಿಸಿಟ್ಟು, ಅಲ್ಲಿ ಜೆಸಿಬಿ ಮೂಲಕ ಲಾರಿಗೆ ಲೋಡ್ ನಡೆಸುತ್ತಿದ್ದರು. ಬಳಿಕ ಅಲ್ಲಿಂದ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ನಡೆಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು, ಭೂ ಮತ್ತು ಗಣಿ ಇಲಾಖೆ ಜಂಟಿಯಾಗಿ ದಾಳಿ ನಡೆಸಿದ್ದಾರೆ. ಅಲ್ಲದೆ ಮರಳುಗಾರಿಕೆ ನಡೆಸುತ್ತಿದ್ದ ಎರಡು ನಾಡದೋಣಿಗಳಿಗೆ ರೂ.10,000 ದಂಡ ವಿಧಿಸಲಾಗಿದೆ.