×
Ad

ಚೀನಾ-ನೇಪಾಳ ರೈಲು ಮಾರ್ಗ

Update: 2016-03-21 23:33 IST
ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದ ಪೀಪಲ್‌ನಲ್ಲಿ ಸೋಮವಾರ ನೇಪಾಳ ಪ್ರಧಾನಿ ಖಡ್ಗಪ್ರಸಾದ್ ಒಲಿ (ಎಡ ಭಾಗದಲ್ಲಿರುವವರು) ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಭೇಟಿಯಾದರು.

ಸರಕಿಗಾಗಿ ಭಾರತವನ್ನೇ ಸಂಪೂರ್ಣ ಅವಲಂಬಿಸುವುದನ್ನು ನಿವಾರಿಸಿಕೊಳ್ಳಲು ನೇಪಾಳ ಕ್ರಮ

ಬೀಜಿಂಗ್, ಮಾ. 21: ಚೀನಾ ಮತ್ತು ನೇಪಾಳಗಳನ್ನು ಟಿಬೆಟ್‌ನ ಮೂಲಕ ಸಂಪರ್ಕಿಸುವ ರೈಲು ಮಾರ್ಗವೊಂದನ್ನು ನಿರ್ಮಿಸಬೇಕೆನ್ನುವ ನೇಪಾಳದ ಪ್ರಧಾನಿ ಕೆ.ಪಿ. ಒಲಿ ಅವರ ಮನವಿಗೆ ಚೀನಾ ಸೋಮವಾರ ಒಪ್ಪಿಗೆ ನೀಡಿದೆ.
ಸುತ್ತಲೂ ಭೂಮಿಯಿಂದ ಆವರಿಸಲ್ಪಟ್ಟಿರುವ ನೇಪಾಳವು ಸಂಪೂರ್ಣವಾಗಿ ಭಾರತವನ್ನು ಅವಲಂಬಿಸುವುದನ್ನು ತಪ್ಪಿಸುವುದಕ್ಕಾಗಿ ಆ ದೇಶದ ಪ್ರಧಾನಿ ಈ ಕ್ರಮವನ್ನು ತೆಗೆದುಕೊಂಡಿದ್ದಾರೆ.
ಅದೇ ವೇಳೆ, 10 ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ನೇಪಾಳ ಮತ್ತು ಚೀನಾಗಳು ತಮ್ಮ ನಡುವಿನ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಸಿಕೊಂಡಿವೆ.

ಏಳು ದಿನಗಳ ಭೇಟಿಗಾಗಿ ರವಿವಾರ ಚೀನಾಕ್ಕೆ ಆಗಮಿಸಿದ ಒಲಿ ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡಲಾಯಿತು. ಗ್ರೇಟ್ ಹಾಲ್ ಆಫ್ ದ ಪೀಪಲ್‌ನಲ್ಲಿ ಚೀನಾ ಪ್ರಧಾನಿ ಲಿ ಕೆಕಿಯಂಗ್ ನೇಪಾಳ ಪ್ರಧಾನಿಯನ್ನು ಸ್ವಾಗತಿಸಿದರು. ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನೂ ಭೇಟಿಯಾದರು.
ಇತ್ತೀಚೆಗೆ ಪ್ರತಿಭಟನಾನಿರತ ಭಾರತ ಮೂಲದ ಮದೇಸಿ ಜನಾಂಗೀಯರು ಭಾರತದೊಂದಿಗೆ ನೇಪಾಳ ಹೊಂದಿರುವ ಗಡಿದಾಟನ್ನು ಮುಚ್ಚಿದ್ದರು. ಇದರಿಂದ ಆರು ತಿಂಗಳ ಕಾಲ ನೇಪಾಳಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿ ಆ ದೇಶ ಭಾರೀ ಸಮಸ್ಯೆಯನ್ನು ಎದುರಿಸಿತ್ತು. ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿತ್ತು.
ಇಂಥದೇ ಪರಿಸ್ಥಿತಿ ಮರುಕಳಿಸುವುದನ್ನು ತಪ್ಪಿಸುವ ಉದ್ದೇಶದಿಂದ, ಚೀನಾದಿಂದ ಬರುವ ಸರಕು ಪೂರೈಕೆ ಮಾರ್ಗಗಳನ್ನು ಹೆಚ್ಚಿಸುವ ನಿರೀಕ್ಷೆಗಳನ್ನು ಇಟ್ಟುಕೊಂಡು ನೇಪಾಳ ಪ್ರಧಾನಿ ಚೀನಾ ಪ್ರವಾಸ ಕೈಗೊಂಡಿದ್ದರು.
ಮಾತುಕತೆಯ ವೇಳೆ, ಉಭಯ ನಾಯಕರು ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರವಾಗಿ ಮರುಪರಿಶೀಲನೆ ನಡೆಸಿದರು ಹಾಗೂ ಉಭಯ ದೇಶಗಳ ನಡುವೆ ನಿಧಾನವಾಗಿ ಬಲಗೊಳ್ಳುತ್ತಿರುವ ಸಂಬಂಧದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಮಾತುಕತೆಯ ವೇಳೆ, ಟಿಬೆಟ್‌ವರೆಗಿರುವ ಚೀನಾದ ರೈಲು ಮಾರ್ಗವನ್ನು ನೇಪಾಳದವರೆಗೆ ವಿಸ್ತರಿಸುವ ಪ್ರಸ್ತಾಪವನ್ನು ನೇಪಾಳದ ಪ್ರಧಾನಿ ಮಂಡಿಸಿದರು.
ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶ ಸಚಿವಾಲಯದ ಉಪ ಮುಖ್ಯಸ್ಥ ಹೂ ಯಂಕಿ, ರೈಲು ಹಳಿಯನ್ನು ಟಿಬೆಟ್‌ನ ಶಿಗಟ್ಸೆ ನಗರದಿಂದ ನೇಪಾಳದ ಗಡಿಯಲ್ಲಿರುವ ಗಿರೊಂಗ್‌ವರೆಗೆ ವಿಸ್ತರಿಸುವ ಯೋಜನೆಯನ್ನು ಚೀನಾ ಹೊಂದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News