×
Ad

ರಾಷ್ಟ್ರಗೀತೆ ತಪ್ಪಾಗಿಹಾಡಿದ ಬಿಗ್‌ಬಿ?

Update: 2016-03-21 23:46 IST

ಹೊಸದಿಲ್ಲಿ,ಮಾ.21: ಭಾರತ-ಪಾಕ್ ತಂಡಗಳ ನಡುವೆ ಶನಿವಾರ ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದ ವೇಳೆ ರಾಷ್ಟ್ರಗೀತೆಯನ್ನು ತಪ್ಪುತಪ್ಪಾಗಿ ಹಾಡಿದ್ದಾರೆಂದು ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ವಿರುದ್ಧ ಹೊಸದಿಲ್ಲಿಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಲಾಗಿದೆ.
   ಕೇಂದ್ರ ಗೃಹ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ರಾಷ್ಟ್ರಗೀತೆಯು 52 ಸೆಕೆಂಡ್‌ಗಳ ಅವಧಿಯದ್ದಾಗಿದೆ. ಆದರೆ ಅಮಿತಾಭ್, ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ್ದರು ಹಾಗೂ ಅದು 1 ನಿಮಿಷ 22 ಸೆಕೆಂಡ್‌ಗಳ ಅವಧಿಯದ್ದಾಗಿತ್ತೆಂದು ದೂರಿನಲ್ಲಿ ಆರೋಪಿಸಲಾಗಿದೆ.
   ಇದೇ ವಿಷಯಕ್ಕೆ ಸಂಬಂಧಿಸಿ ಅಮಿತಾಭ್ ವಿರುದ್ಧ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಉಲ್ಲಾಸ್ ಪಿ.ಆರ್.ಎಂಬವರಿಂದ ಇನ್ನೊಂದು ದೂರು ದಾಖಲಾಗಿದೆ. ಬಾಲಿವುಡ್‌ನ ಈ ಖ್ಯಾತ ನಟ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲೂ ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ್ದಾರೆಂದು ಅವರು ಆರೋಪಿಸಿದ್ದಾರೆ.
ಈಡನ್‌ಗಾರ್ಡನ್‌ನಲ್ಲಿ ನಡೆದ ಭಾರತ-ಪಾಕ್ ಟಿ20 ಪಂದ್ಯದ ಆರಂಭಕ್ಕೆ ಮುನ್ನ ಬಚ್ಚನ್ ರಾಷ್ಟ್ರಗೀತೆಯನ್ನು ಹಾಡಿದ್ದರು.
    ಇದಕ್ಕೂ ಮುನ್ನ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ತಾನು ಉಪಸ್ಥಿತನಿರಲು 4 ಕೋಟಿ ರೂ. ಶುಲ್ಕವನ್ನು ವಿಧಿಸಿದ್ದರೆಂದು ವರದಿಯಾಗಿತ್ತು. ಆದರೆ ಬೆಂಗಾಲ್ ಕ್ರಿಕೆಟ್ ಅಸೋಸಿಯೇಶನ್‌ನ ಉನ್ನತ ಅಧಿಕಾರಿಯೊಬ್ಬರು ಅದನ್ನು ಅಲ್ಲಗಳೆದಿದ್ದು, ಅಮಿತಾಭ್ ಒಂದು ಪೈಸೆ ಕೂಡಾ ಪಡೆದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News