×
Ad

ಉತ್ತರಾಖಂಡ ಕಾಂಗ್ರೆಸ್ ಬಂಡಾಯ:

Update: 2016-03-21 23:54 IST

ಹೊಸದಿಲ್ಲಿ, ಮಾ.21: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಬಂಡಾಯ ಕಾಂಗ್ರೆಸ್ ಶಾಸಕ ವಿಜಯ್ ಬಹುಗುಣರ ಪುತ್ರನನ್ನು ಕಾಂಗ್ರೆಸ್ ಪಕ್ಷವು ಉಚ್ಚಾಟಿಸಿದೆ. ಇದೇ ವೇಳೆ, ದಿಲ್ಲಿಯಲ್ಲಿ ವಸತಿ ಹೂಡಿದ್ದ 9 ಮಂದಿ ಬಂಡುಕೋರ ಕಾಂಗ್ರೆಸ್ ಶಾಸಕರು ಐಶಾರಾಮಿ ಹೊಟೇಲನ್ನು ತೊರೆದು ಭೂಗತರಾಗಿದ್ದಾರೆ.
ಇಂದು ಸಂಜೆ 6:45ರ ವೇಳೆ ಉತ್ತರಾಖಂಡದ 28 ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್‌ನ ಬಂಡುಕೋರ ಶಾಸಕರ ಜೊತೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಭೇಟಿ ಮಾಡಲಿದ್ದಾರೆ. ಅಪರಾಹ್ನ ದಿಲ್ಲಿಯಲ್ಲಿರುವ ಬಹುಗುಣರ ನಿವಾಸದಲ್ಲಿ ಬಂಡುಕೋರರು ಸಭೆ ನಡೆಸುವರೆಂಬ ಮಾತು ಕೇಳಿ ಬರುತ್ತಿದೆ. ಆದರೆ, ಇದುವರೆಗೆ ಸಭೆ ನಡೆದಿಲ್ಲ.
ಇದೇ ವೇಳೆ, ಉತ್ತರಾಖಂಡ ಕಾಂಗ್ರೆಸ್, ವಿಜಯ್ ಬಹುಗುಣರ ಪುತ್ರ ಸಾಕೇತ್‌ರನ್ನು ಪಕ್ಷದಿಂದ 6 ವರ್ಷಗಳ ಕಾಲಕ್ಕೆ ಉಚ್ಚಾಟಿಸಿದೆ. ಬಂಡಾಯದ ಪಿತೂರಿ ಹೆಣೆದವರು ಸಾಕೇತ್ ಬಹುಗುಣ ಎಂಬುದು ಕಾಂಗ್ರೆಸ್‌ನ ಆರೋಪವಾಗಿದೆ.
ತನಗೆ ಬಂಡುಕೋರ ಶಾಸಕರ ಬೆಂಬಲವಿದ್ದು, ಬಹುಮತವಿರುವುದರಿಂದ ಸರಕಾರ ರಚಿಸಲು ಅವಕಾಶ ನೀಡುವಂತೆ ಬಿಜೆಪಿ ಅಹವಾಲು ಮಂಡಿಸಿದೆ. ಮುಖ್ಯಮಂತ್ರಿ ಹರೀಶ್ ರಾವತ್ ವಿಧಾನಸಭೆಯಲ್ಲಿ ನಾಳೆಯೇ ಬಹುಮತ ಸಾಬೀತುಪಡಿಸಬೇಕು. ನಿಗದಿಯಾಗಿರುವಂತೆ ಸೋಮವಾರವಲ್ಲವೆಂದು ಅದು ಒತ್ತಾಯಿಸಿದೆ.

ಕಳೆದ ವಾರ ವಿಧಾನಸಭೆಯಲ್ಲಿ ಹಣಕಾಸು ಮಸೂದೆ ಅಥವಾ ರಾಜ್ಯ ಬಜೆಟನ್ನು ಮತಕ್ಕೆ ಹಾಕಿದಾಗ ರಾವತ್ ಸರಕಾರವು ಅಲ್ಪಮತದ್ದಾಗಿತ್ತು. ಆದುದರಿಂದ ಸರಕಾರ ಕೆಳಗಿಳಿಯಬೇಕು ಅಥವಾ ಅದನ್ನು ಉಚ್ಚಾಟಿಸಬೇಕೆಂದು ಬಿಜೆಪಿ ಹಾಗೂ ಬಂಡುಕೋರ ಶಾಸಕರು ರಾಷ್ಟ್ರಪತಿಗೆ ಹೇಳಲಿದ್ದಾರೆ. ಹಣಕಾಸು ಮಸೂದೆಯೊಂದು ವಿಫಲವಾದರೆ, ಸರಕಾರವೊಂದು ಉರುಳುತ್ತದೆ.
ಹಣಕಾಸು ಮಸೂದೆಯನ್ನು ಮತಕ್ಕೆ ಹಾಕಬೇಕು ಹಾಗೂ ಭೌತಿಕವಾಗಿ ಮತಗಳ ಎಣಿಕೆ ನಡೆಸಬೇಕೆಂದು ಕಾಂಗ್ರೆಸ್ ಬಂಡುಕೋರರ ಬೆಂಬಲದೊಂದಿಗೆ ಬಿಜೆಪಿ ಆಗ್ರಹಿಸಿತ್ತು. ಆದರೆ, ವಿಧಾನಸಭಾಧ್ಯಕ್ಷರು ಅದಕ್ಕೆ ಅವಕಾಶ ನೀಡದೆ, ಧ್ವನಿಮತದಿಂದ ಮಸೂದೆ ಮಂಜೂರಾಗಿದೆಯೆಂದು ಘೋಷಿಸಿದ್ದರು.
9 ಮಂದಿ ಬಂಡುಕೋರರನ್ನು ಪಕ್ಷಾಂತರ ವಿರೋಧಿ ಕಾಯ್ದೆಯನ್ವಯ ಸದನದಿಂದ ಅಮಾನ್ಯಗೊಳಿಸಬೇಕೆಂದು ಕಾಂಗ್ರೆಸ್ ಹೇಳುತ್ತಿದೆ. ಪ್ರತ್ಯೇಕ ಗುಂಪಾಗಿ ಮಾನ್ಯ ಮಾಡಬೇಕಾದಲ್ಲಿ ಒಂದು ಪಕ್ಷದ ಮೂರನೆ ಎರಡರಷ್ಟು ಸದಸ್ಯರು ಈ ಪ್ರಕರಣದಲ್ಲಿ 24 ಮಂದಿ ಕಾಂಗ್ರೆಸ್ ಸದಸ್ಯರು ಪಕ್ಷದಿಂದ ಹೊರಗೆ ಬರಬೇಕಾಗುತ್ತದೆ.
70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 36. ಪಕ್ಷದ 9 ಮಂದಿ ಶಾಸಕರು ಬಂಡಾಯವೆದ್ದಿರುವುದರಿಂದು ಸರಕಾರ ಅಲ್ಪ ಮತಕ್ಕಿಳಿದಿದೆ. ಅದಕ್ಕೆ ಪಿಡಿಎಫ್‌ನ 6 ಮಂದಿ ಶಾಸಕರ ಬೆಂಬಲವಿದೆ.
ಉತ್ತರಾಖಂಡ ವಿಧಾನಸಭಾಧ್ಯಕ್ಷರು ಕಾಂಗ್ರೆಸ್ ಬಂಡುಕೋರ ಶಾಸಕರಿಗೆ ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಿದ್ದರು. ಆದರೆ, ಅವರು ವಾರಾಂತ್ಯದಲ್ಲಿ ಗುರ್ಗಾಂವ್‌ನ ಲೀಲಾ ಹೊಟೇಲ್‌ನಲ್ಲಿ ತಂಗಿದ್ದುದರಿಂದ, ಡೆಹ್ರಾಡೂನ್‌ನ ಅವರ ಮನೆಗಳ ಹೊರಗೆ ನೋಟಿಸ್‌ಗಳನ್ನು ಅಂಟಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News