×
Ad

ಮೆಸ್ಕಾಂ ಮೀಟರ್ ರೀಡರ್‌ಗಳಿಂದ ‘ವಿಧಾನಸೌಧ ಚಲೋ’

Update: 2016-03-21 23:56 IST

ಮಂಗಳೂರು, ಮಾ.21: ಬೇಳೂರು ರಾಘವೇಂದ್ರ ಶೆಟ್ಟಿ ಅಭಿಮಾನಿ ಬಳಗದಿಂದ ಮೆಸ್ಕಾಂನಲ್ಲಿ ಗುತ್ತಿಗೆ ಆಧಾರದಲ್ಲಿ ಮಾಪಕ ಓದುಗರಾಗಿ ಕೆಲಸ ಮಾಡುತ್ತಿರುವ 43 ಮಂದಿಯನ್ನು ಖಾಯಂಗೊಳಿಸಲು ಒತ್ತಾಯಿಸಿ ‘ವಿಧಾನಸೌಧ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೇಳೂರು ರಾಘವೇಂದ್ರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

1998ರಿಂದಲೂ 43 ಮಂದಿ ಕನಿಷ್ಠ ವೇತನದೊಂದಿಗೆ ಮಾಪಕ ಓದುಗರಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 7,528 ಗ್ಯಾಂಗ್‌ಮನ್‌ಗಳನ್ನು 2003ರಲ್ಲಿ ಖಾಯಂಗೊಳಿಸಲಾಗಿದೆ. ಆದರೆ ತಾತ್ಕಾಲಿಕ ಮೀಟರ್ ರೀಡರ್ಸ್‌ಗಳನ್ನು ಖಾಯಂಗೊಳಿಸಿಲ್ಲ ಎಂದರು.

ನಂತರದ ಸರಕಾರವು ಮೀಟರ್ ರೀಡಿಂಗ್‌ನ್ನು ಹೊರ ಗುತ್ತಿಗೆಗೆ ಕೊಡಲು ಹೊರಟಾಗ ಮಾಪಕ ಓದುವವರು ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿ ತಮ್ಮ ಸೇವೆಯನ್ನು ಖಾಯಂಹುದ್ದೆಗೆ ಪರಿಗಣಿಸಲು ಕೋರಿದ್ದರು. ಅರ್ಜಿಯನ್ನು ಉಚ್ಚ ನ್ಯಾಯಾಲಯವು ಪುರಸ್ಕರಿಸಿಲ್ಲ. ತದನಂತರ ಮೇಲ್ಮನವಿ ಸಲ್ಲಿಸಿದಾಗ ಉಚ್ಚ ನ್ಯಾಯಾಲಯವು 2013ರಲ್ಲಿ ನೀಡಿದ ತೀರ್ಪಿನಲ್ಲಿ ಮನವಿದಾರರ ನೇಮಕಾತಿಯನ್ನು ಸಕ್ರಮಗೊಳಿಸಿಲ್ಲ. ಆದ್ದರಿಂದ ತಾತ್ಕಾಲಿಕ ನೌಕರರ ಸೇವೆಯನ್ನು ಖಾಯಂ ಗೊಳಿಸಲು ಕೋರಿ ‘ವಿಧಾನಸೌಧ ಚಲೋ’ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಇಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ನೀಡಿ, ವಿಧಾನಸೌಧ ಚಲೋ ನಡೆಸಲಾಗುವುದು. ಮಾ. 22ರಂದು ಮುಖ್ಯಮಂತ್ರಿ ಮತ್ತು ಇಂಧನ ಸಚಿವರಿಗೆ ಮನವಿ ನೀಡಲಾಗುವುದು. ಇಲ್ಲಿಯ ತನಕ ಸಚಿವರು, ಜನ ಪ್ರತಿನಿಧಿಗಳಿಗೆ ನೀಡಿದ ಮನವಿಗೆ ಯಾವುದೇ ಸ್ಪಂದನ ದೊರೆತಿಲ್ಲ ಎಂದವರು ಹೇಳಿದರು.

ಮಾಪಕ ಓದುಗರಾದ ಸುರೇಶ್ ಶೆಟ್ಟಿ, ಉದಯಕುಮಾರ್, ಅಂಬರೀಷ್, ಸುರೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News