ಗೋ ಕ್ರಾಂತಿ ಮಂಚ್ ನ ಗೋಪಾಲ್ ಮಹಾರಾಜ್ ಪ್ರಚೋದನೆಯಿಂದ ಜಾನುವಾರು ವ್ಯಾಪಾರಿಗಳ ಕಗ್ಗೊಲೆ?

Update: 2016-03-22 03:09 GMT

ರಾಂಚಿ, ಮಾ.22: ರಾಷ್ಟ್ರಮಟ್ಟದ ಗೋ ಸಂರಕ್ಷಣಾ ಗುಂಪಿನ ಜತೆ ಗುರುತಿಸಿಕೊಂಡಿರುವ ಹಿಂದೂ ಸ್ವಾಮೀಜಿಯೊಬ್ಬರು ಜಾನುವಾರು ವ್ಯಾಪಾರಿಗಳ ಮೇಲೆ ದ್ವೇಷದ ಕಿಡಿ ಹಚ್ಚಲು ಪ್ರಚೋದನೆ ನೀಡಿದ್ದಾರೆ ಎಂದು ಇತ್ತೀಚೆಗೆ ಕಗ್ಗೊಲೆಗೀಡಾದ ಜಾನುವಾರು ವ್ಯಾಪಾರಿಗಳ ಕುಟುಂಬಸ್ಥರು ಆಪಾದಿಸಿದ್ದಾರೆ.

ಕಳೆದ ಶುಕ್ರವಾರ ಜಾರ್ಖಂಡ್‌ನ ಬಲುಮಥ್‌ನಲ್ಲಿ ಮೌಲಮ್ ಅನ್ಸಾರಿ ಹಾಗೂ ಇಮ್ತಿಯಾಝ್ ಖಾನ್ ಎಂಬ ಇಬ್ಬರನ್ನು ಉದ್ರಿಕ್ತ ಗುಂಪು ಕೊಲೆ ಮಾಡಿ ಮರಕ್ಕೆ ನೇತು ಹಾಕಿತ್ತು. ಇಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ನಡುವೆ ಜಾನುವಾರು ವ್ಯಾಪಾರ ಹಾಗೂ ಗೋಮಾಂಸ ಸೇವನೆ ವಿಚಾರದಲ್ಲಿ ದ್ವೇಷ ಮನೋಭಾವ ಹಿಂದಿನಿಂದಲೂ ಇತ್ತು ಎನ್ನಲಾಗಿದೆ.


ಸಂತ್ರಸ್ತ ಕುಟುಂಬದವರು, ಗ್ರಾಮಸ್ಥರು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ಆಚಾರ್ಯ ಗೋಪಾಲ್ ಮಾಂಜಿ ಮಹಾರಾಜ್ ಅವರ ವಿರುದ್ಧ ಬೊಟ್ಟು ಮಾಡುತ್ತಿದ್ದಾರೆ. ಗೋ ಸಂರಕ್ಷಣೆ ಮತ್ತು ಗೋ ವಧೆ ವಿರೋಧಿ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಗ್ರೋ ಕ್ರಾಂತಿ ಮಂಚ್ ಪರವಾಗಿ ಪ್ರಚೋದನಕಾರಿ ಉಪನ್ಯಾಸಗಳನ್ನು ಇವರು ನೀಡುತ್ತಾ ಬಂದಿದ್ದಾರೆ. ಇದೇ ಗುಂಪಿನ ಒಬ್ಬರನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ತಮ್ಮ ಧಾರ್ಮಿಕ ಉಪನ್ಯಾಸಗಳಲ್ಲಿ ಗೋಪಾಲ್ ಮಾಂಜಿ ಗೋ ಹತ್ಯೆ ವಿರುದ್ಧ ಅತ್ಯಂತ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದೇ ಈ ಹತ್ಯೆಗೆ ಮೂಲ ಎನ್ನಲಾಗಿದೆ. ಇವರ ಉಪನ್ಯಾಸ ಕೇಳಿದ ಬಳಿಕ ಈ ಗುಂಪಿನ ಕಾರ್ಯಕರ್ತರು ಗೋಡೆ ಬರಹಗಳಲ್ಲಿ "ಗೋಮಾಂಸ ಭಕ್ಷಕರನ್ನು ನೇಣುಹಾಕಿ ಕೊಲ್ಲಿ" ಎಂದು ಬರೆದಿದ್ದರು. ಈ ವಿಷಯವನ್ನು ರಾಷ್ಟ್ರೀಯ ಜನತಾದಳ ಶಾಸಕ ರಾಮಚಂದ್ರ ಸಿಂಗ್ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಮಾಂಜಿ ಅವರನ್ನು ಸಂಪರ್ಕಿಸುವ ಪ್ರಯತ್ನ ಫಲ ನೀಡಲಿಲ್ಲ.’


ಆದರೆ ಪೊಲೀಸರ ಪ್ರಕಾರ, ಹಣ ಮತ್ತು ಜಾನುವಾರು ಕಳ್ಳತನಕ್ಕಾಗಿ ಕೊಲೆ ನಡೆದಿದೆ. ಈ ಘಟನೆಗೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿದ್ದು, ಉತ್ತರ ಪ್ರದೇಶದಲ್ಲಿ ಮಹ್ಮದ್ ಇಖ್ಲಕ್ ಅವರನ್ನು ಗೋಮಾಂಸ ಭಕ್ಷಣೆಯ ಆರೋಪದಲ್ಲಿ ಹತ್ಯೆ ಮಾಡಿದ ಘಟನೆಯನ್ನು ಮತ್ತೆ ನೆನಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News